ಶಿವಮೊಗ್ಗ: ನಾಡಹಬ್ಬ ದಸರಾ ಮಹೋತ್ಸವದ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಶಿವಮೊಗ್ಗ ನಗರ ಸಜ್ಜಾಗುತ್ತಿದ್ದು, ಅಂಬಾರಿ ಹೊರುವ ಸಾಗರ್ ಸೇರಿದಂತೆ ಗಜಪಡೆ ಮೆರವಣಿಗೆಯ ತಾಲೀಮು ನಡೆಸಿತು.

ಅಕ್ಟೋಬರ್ 21ರ ಬುಧವಾರ ನಗರದ ಅಲ್ಲಮಪ್ರಭು ಮೈದಾನದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ. ಅಂದು ಮಧ್ಯಾಹ್ನ 2:30ಕ್ಕೆ ಶಿವಪ್ಪ ನಾಯಕ ಅರಮನೆಯ ಆವರಣದಿಂದ ಬೆಳ್ಳಿ ಮಂಟಪದಲ್ಲಿ ಪ್ರತಿಷ್ಠಾಪಿಸಲಾದ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯ ವೈಭವದ ಅಂಬಾರಿ ಮೆರವಣಿಗೆ ಆರಂಭವಾಗಲಿದೆ.

ಮೆರವಣಿಗೆಯಲ್ಲಿ ಅಂಬಾರಿ ಹೊರುವ ಸಾಗರ್ ಆನೆಯೊಂದಿಗೆ ಬಹದ್ದೂರ್ ಮತ್ತು ಸೋಮಣ್ಣ ಆನೆಗಳು ಹೆಜ್ಜೆ ಹಾಕಲಿವೆ. ಈ ಹಿನ್ನೆಲೆಯಲ್ಲಿ ಇಂದು ನಗರದ ವಾಸವಿ ಶಾಲೆಯ ಆವರಣದಿಂದ ಅಲ್ಲಮಪ್ರಭು ಮೈದಾನದವರೆಗೆ ಮೆರವಣಿಗೆ ಸಾಗುವ ಮಾರ್ಗದಲ್ಲಿ ಮೂರು ಆನೆಗಳಿಗೆ ತಾಲೀಮು ನಡೆಸಲಾಯಿತು.

ಮೆರವಣಿಗೆಯ ಮಾರ್ಗ, ಸಾರ್ವಜನಿಕರ ಜನಸಂದಣಿ ಹಾಗೂ ನಗರದ ಪರಿಸರಕ್ಕೆ ಆನೆಗಳು ಹೊಂದಿಕೊಳ್ಳುವಂತೆ ತಾಲೀಮು ನಡೆಸಲಾಗಿದ್ದು, ದಸರಾ ಮೆರವಣಿಗೆಯನ್ನು ಸುಗಮವಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.

ಈ ಸಂದರ್ಭದಲ್ಲಿ ವನ್ಯಜೀವಿ ವಿಭಾಗದ ವೈದ್ಯರಾದ ಡಾ. ಮುರಳಿ, ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.

ನಾಡದೇವಿ ಚಾಮುಂಡೇಶ್ವರಿಯ ವೈಭವದ ಮೆರವಣಿಗೆಗೆ ಗಜಪಡೆ ಸಜ್ಜಾಗುತ್ತಿದ್ದು, ಬನ್ನಿ ಮುಡಿಯುವ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಶಿವಮೊಗ್ಗ ನಗರದ ಜನರು ಕಾತರದಿಂದ ಕಾಯುತ್ತಿದ್ದಾರೆ.