ಶಿವಮೊಗ್ಗ: ನಾಡಹಬ್ಬ ದಸರಾ ಸಂಭ್ರಮಕ್ಕೆ ಶಿವಮೊಗ್ಗ ನಗರ ಸಜ್ಜಾಗುತ್ತಿದ್ದು, ವಿಜಯದಶಮಿ ಜಂಬೂಸವಾರಿಯ ಮೆರುಗು ಹೆಚ್ಚಿಸಲು ಸಕ್ರೆಬೈಲು ಬಿಡಾರದ ಗಜಪಡೆ ನಗರಕ್ಕೆ ಆಗಮಿಸಿದೆ. ಸಾಗರ್, ಬಹದ್ದೂರ್ ಹಾಗೂ ಸೋಮಣ್ಣ ಆನೆಗಳಿಗೆ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮಂಗಳವಾದ್ಯ ಹಾಗೂ ಪೂರ್ಣಕುಂಭದೊಂದಿಗೆ ಭವ್ಯ ಸ್ವಾಗತ ನೀಡಲಾಯಿತು.

ಮಹಾನಗರ ಪಾಲಿಕೆ ಹಾಗೂ ದಸರಾ ಸಮಿತಿಯ ವತಿಯಿಂದ ಆಗಮಿಸಿದ ಗಜಪಡೆಗೆ ಹಾರ ಹಾಕಿ, ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಲಾಯಿತು. ಬಳಿಕ ಆನೆಗಳಿಗೆ ಹಣ್ಣು-ಹಂಪಲು ನೀಡಿ ಗೌರವಿಸಲಾಯಿತು. ಆನೆಗಳ ಆಗಮನದಿಂದ ನಗರದ ದಸರಾ ಸಂಭ್ರಮ ಮತ್ತಷ್ಟು ಕಳೆಗಟ್ಟಿದ್ದು, ಗಜಪಡೆಯನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರು ಹಾಗೂ ಆನೆಪ್ರಿಯರು ಆಗಮಿಸಿದ್ದರು.

ಜಂಬೂಸವಾರಿಗೆ ಗಜಪಡೆ ಸಿದ್ಧತೆ: ಪಟಾಕಿ ಸದ್ದಿಗೂ ಬೆದರದಂತೆ ತಾಲೀಮು!

ಈ ಬಾರಿಯ ವಿಜಯದಶಮಿ ಮೆರವಣಿಗೆಯಲ್ಲಿ ಸಾಗರ್ ಆನೆಯು ನಾಡದೇವಿ ಚಾಮುಂಡೇಶ್ವರಿಯ ಮೂರ್ತಿ ಹಾಗೂ ಬೆಳ್ಳಿ ಅಂಬಾರಿಯನ್ನು ಹೊತ್ತು ಸಾಗಲಿದ್ದು, ಬಹದ್ದೂರ್ ಮತ್ತು ಸೋಮಣ್ಣ ಆನೆಗಳು ಸಾಲಾನೆಗಳಾಗಿ ಹೆಜ್ಜೆ ಹಾಕಲಿವೆ. ಹೀಗಾಗಿ ಜಂಬೂಸವಾರಿಯ ಯಶಸ್ಸಿಗಾಗಿ ಗಜಪಡೆಗೆ ವಿಶೇಷ ತಾಲೀಮು ಆರಂಭಿಸಲಾಗಿದೆ.

ನಗರದ ಪ್ರಮುಖ ರಸ್ತೆಗಳಲ್ಲಿ ಸಾಗುವಾಗ ಉಂಟಾಗುವ ಜನಜಂಗುಳಿ, ವಾಹನ ದಟ್ಟಣೆ ಹಾಗೂ ಪಟಾಕಿಗಳ ಸದ್ದಿಗೆ ಆನೆಗಳು ಹೊಂದಿಕೊಳ್ಳುವಂತೆ ಶುಕ್ರವಾರ ಬೆಳಗ್ಗೆ ತಾಲೀಮು ನಡೆಸಲಾಯಿತು. ಜಂಬೂಸವಾರಿ ಸಾಗುವ ಮಾರ್ಗದಲ್ಲೇ ಆನೆಗಳನ್ನು ಕರೆದೊಯ್ದು, ಫ್ರೀಡಂ ಪಾರ್ಕ್ವರೆಗೆ ಅಭ್ಯಾಸ ಮಾಡಿಸಲಾಯಿತು.

ಈ ವೇಳೆ ಪಟಾಕಿ ಸಿಡಿಸಿ, ಅದರ ಶಬ್ದಕ್ಕೆ ಆನೆಗಳು ಗಾಬರಿಯಾಗದಂತೆ ಹಾಗೂ ಜನಸಂದಣಿಯ ನಡುವೆ ಶಾಂತವಾಗಿ ಸಾಗುವಂತೆ ತರಬೇತಿ ನೀಡಲಾಯಿತು. ವಿಜಯದಶಮಿ ದಿನದಂದು ಯಾವುದೇ ಅಡಚಣೆಯಿಲ್ಲದೆ ಮೆರವಣಿಗೆ ಸಾಗಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.

ಈ ಮಾರ್ಗದಲ್ಲಿ ಸಾಗಲಿದೆ ಜಂಬೂಸವಾರಿ
ಶಿವಮೊಗ್ಗದ ಐತಿಹಾಸಿಕ ವಿಜಯದಶಮಿ ಜಂಬೂಸವಾರಿ ಕೋಟೆ ರಸ್ತೆ, ಗಾಂಧಿ ಬಜಾರ್, ನೆಹರು ರಸ್ತೆ, ದುರ್ಗಿಗುಡಿ ಹಾಗೂ ಜೈಲ್ ರಸ್ತೆಯ ಮೂಲಕ ಸಾಗಿ ಫ್ರೀಡಂ ಪಾರ್ಕ್ ತಲುಪಲಿದೆ.

ನಾಡದೇವಿ ಚಾಮುಂಡೇಶ್ವರಿಯ ಮೂರ್ತಿ ಹಾಗೂ ಬೆಳ್ಳಿ ಅಂಬಾರಿಯನ್ನು ಹೊತ್ತ ಸಾಗರ್ ಆನೆಯ ಗಾಂಭೀರ್ಯದ ನಡಿಗೆ, ಅದರೊಂದಿಗೆ ಹೆಜ್ಜೆ ಹಾಕುವ ಬಹದ್ದೂರ್ ಮತ್ತು ಸೋಮಣ್ಣ ಆನೆಗಳ ಸೊಬಗು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಲಿವೆ. ಗಜಪಡೆಯ ತಾಲೀಮು ಆರಂಭವಾಗಿರುವುದರಿಂದ ದಸರಾ ಸಂಭ್ರಮಕ್ಕೆ ಮತ್ತಷ್ಟು ಕಳೆ ಬಂದಿದ್ದು, ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ನಗರವಾಸಿಗಳು ಕಾತರದಿಂದ ಕಾಯುತ್ತಿದ್ದಾರೆ.