
ಶಿವಮೊಗ್ಗ: ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸು ನೆಲೆಸಿರುತ್ತದೆ. ದೇಹದ ಪ್ರತಿಯೊಂದು ಅಂಗಕ್ಕೂ ದೈಹಿಕ ಚಟುವಟಿಕೆ ಅಗತ್ಯವಾಗಿದ್ದು, ವಿಶೇಷವಾಗಿ ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ. ಪಿ. ನಾರಾಯಣ್ ಹೇಳಿದರು.

ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ (ಎ.ಟಿ.ಎನ್.ಸಿ.ಸಿ.) ಚಂದನಾ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ ಟೇಬಲ್ ಟೆನ್ನಿಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕ ಜೀವನಶೈಲಿಯಿಂದಾಗಿ ಮಕ್ಕಳಲ್ಲಿಯೂ ವಿವಿಧ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಪೋಷಕರು ಮಕ್ಕಳ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದಿನ ದಿನಗಳಲ್ಲಿ ಒತ್ತಡ, ಆತಂಕ ಎಂಬ ಪದಗಳು ಸಾಮಾನ್ಯವಾಗುತ್ತಿದ್ದು, ಇವುಗಳನ್ನು ನಿಯಂತ್ರಿಸುವಲ್ಲಿ ಕ್ರೀಡೆ ಮಹತ್ವದ ಪಾತ್ರ ವಹಿಸುತ್ತದೆ. ನಿಯಮಿತ ದೈಹಿಕ ಚಟುವಟಿಕೆಗಳು ದೇಹವನ್ನು ಸದೃಢವಾಗಿಸುವುದರ ಜತೆಗೆ ಮನಸ್ಸಿನ ಉಲ್ಲಾಸಕ್ಕೂ ಸಹಕಾರಿಯಾಗುತ್ತವೆ ಎಂದರು.

ಕುವೆಂಪು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ರವೀಂದ್ರ ಗೌಡ ಮಾತನಾಡಿ, ಪಂದ್ಯಾವಳಿಯಲ್ಲಿ 20ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿ ತಂಡಗಳು ಭಾಗವಹಿಸಿವೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ನಿರಂತರ ಅಭ್ಯಾಸ ಮತ್ತು ಪರಿಣಾಮಕಾರಿ ತರಬೇತಿ ಅತ್ಯಗತ್ಯ. ವಿದ್ಯಾರ್ಥಿಗಳು ಕ್ರೀಡಾಸ್ಫೂರ್ತಿಯಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಮಮತಾ ಪಿ.ಆರ್. ಅಧ್ಯಕ್ಷತೆ ವಹಿಸಿದ್ದರು. ವಿಶೇಷಾಧಿಕಾರಿ ಡಾ. ಆರ್.ಎಂ. ಜಗದೀಶ್, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ.ಅಂತೋನಿ ಫ್ರಾನ್ಸಿಸ್, ಉಪನ್ಯಾಸಕರಾದ ಪ್ರವೀಣ್ ಬಿ.ಎನ್, ಶೃತಿ ಉಪಸ್ಥಿತರಿದ್ದರು.