ಶಿವಮೊಗ್ಗ,ಸೆ.18:
ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕಾರಣ ಇಲ್ಲವೇ ಇಲ್ಲ. ಅದು ಇರುವುದೂ ಇಲ್ಲ. ಒಂದು ವೇಳೆ ಇದ್ದರೂ ಹೈಕಮಾಂಡ್ನ ನಿರ್ದೇಶನದಂತೆ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಲಾಗುವುದು. ಪಕ್ಷದ ಸಂಘಟನೆಗೆ ಮೊದಲ ಆದ್ಯತೆ ನೀಡಲಾಗುವುದು. ಸ್ಥಳೀಯ ಚುನಾವಣೆಗೆ ಈಗೀನಿಂದಲೆ ಸಿದ್ದತೆ ನಡೆಸಲಾಗುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷ ಹೆಚ್.ಸಿ. ಯೋಗೀಶ್ ಹೇಳಿದರು.

ಅವರು ತಾವು ಅಧ್ಯಕ್ಷರಾದ ಇದೇ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ನಡೆಸಿ, ತಮಗೆ ಪಕ್ಷ ಅವಕಾಶ ನೀಡಿದೆ. ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತೇನೆ. ಪಕ್ಷ ನನಗೆ ಹಲವು ಅವಕಾಶಗಳನ್ನ ನೀಡಿದೆ. 12 ರಾಜ್ಯಗಳಲ್ಲಿ ಕೆಲಸ ಮಾಡಿದ್ದೇನೆ. ಅಜ್ಜ, ಅಪ್ಪ ಶಾಸಕರಾಗಿದ್ದರು. ನಾನು ಕೂಡ ಪಾಲಿಕೆಯ ಸದಸ್ಯನಾಗಿದ್ದೆ, ಈ ಎಲ್ಲಾ ಅನುಭವಗಳ ಸಾರದಿಂದ ಜಿಲ್ಲೆಯಲ್ಲಿ ಪಕ್ಷವನ್ನು ಮುನ್ನೆಡೆಸುವೆ. ಸವಾಲುಗಳು ಇರುವುದು ನಿಜ. ಸಮರ್ಥವಾಗಿ ಅವುಗಳನ್ನು ಎದುರಿಸುವೆ ಎಂದರು.

ತೀರ್ಥಹಳ್ಳಿ, ಶಿಕಾರಿಪುರ ಮುಂತಾದ ಕಡೆಗಳಲ್ಲಿ ಪಕ್ಷದಲ್ಲಿಯೇ ಬಣ ರಾಜಕಾರಣ ಇದೆ. ಶಿವಮೊಗ್ಗ ಇದಕ್ಕೆ ಹೊರತಾಗಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ಬಣವು ಇಲ್ಲ. ಸಹಜವಾದ ಅಭಿಪ್ರಾಯಗಳು ಇದ್ದೇ ಇರುತ್ತವೆ. ಒಂದು ಸ್ಥಾನಕ್ಕೆ ಹಲವು ಆಕಾಂಕ್ಷಿಗಳು ಇರುತ್ತಾರೆ. ಹಾಗಾಂತ ಇದು ಒಗ್ಗಟ್ಟನ್ನು ಮುರಿಯುವುದಿಲ್ಲ. ಎಲ್ಲಾರನ್ನು ಪ್ರೀತಿ, ವಿಶ್ವಾಸಗಳಿಂದಲೇ ಗೆಲ್ಲುತ್ತೇನೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯು ಸೇರಿದಂತೆ ಮುಂದಿನ ವಿಧಾನ ಸಭಾ ಚುನಾವಣೆಗೆ ಈಗೀನಿಂದಲೇ ಸಿದ್ದತೆ ಮಾಡಿಕೊಳ್ಳುತ್ತೇನೆ ಎಂದರು.

ತೀರ್ಥಹಳ್ಳಿಗೆ ನಾಳೆ ಮುಖ್ಯಮಂತ್ರಿಗಳು ಬರುತ್ತಿದ್ದಾರೆ. ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಅಲ್ಲಿ ಚರ್ಚೆ ನಡೆಯುತ್ತದೆ. ಸುಮಾರು 25000 ರೈತರು ಸೇರುತ್ತಾರೆ. ಮುಖ್ಯಮಂತ್ರಿಗಳು ರೈತರೊಂದಿಗೆ ಸಂವಾದ ನಡೆಸುತ್ತಾರೆ. ವರದಿಯಿಂದ ಆಗುವ ತೊಂದರೆಗಳ ಬಗ್ಗೆ ಮಾಹಿತಿ ಪಡೆಯುತ್ತಾರೆ. ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ಕೈ ಬಿಡಬೇಕು ಎಂಬುದು ನಮ್ಮ ಆಶಯವಾಗಿದೆ ಎಂದರು.
ಪಕ್ಷದಲ್ಲಿ ಹೊರಗಿನ ಕೆಲವರು ಈಗೀನಿಂದಲೇ ಶಾಸಕ ಸ್ಥಾನಕ್ಕೆ ಅಭ್ಯರ್ಥಿಯೆಂದು ಬಿಂಬಿಸಿಕೊಳ್ಳುತ್ತಿದರಲ್ಲಾ ಎಂಬ ಪತ್ರಕರ್ತರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಅದೆಲ್ಲಾ ಇಲ್ಲ. ಇಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ನಡೆಯುವುದಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್, ಉಪಾಧ್ಯಕ್ಷರಾದ ಎಸ್.ಟಿ.ಚಂದ್ರಶೇಖರ್, ಪಿ.ಎಸ್.ಗಿರೀಶ್ ರಾವ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ ಬಂಢಿ, ಗ್ರಾಮಾಂತರ ಮುಖಂಡ ಶ್ರೀನಿವಾಸ್ ಕರಿಯಣ್ಣ, ಉತ್ತರ ಮತ್ತು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕಲೀಂ ಪಾಷ, ಶಿವಕುಮಾರ್, ಹಾಪ್ಕಾಮ್ಸ್ ಅಧ್ಯಕ್ಷ ವಿಜಯ್ ಕುಮಾರ್, ಮಾಜಿ ಜಿ.ಪಂ ಅಧ್ಯಕ್ಷ ಕಲಗೋಡು ರತ್ನಾಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಟಿ.ಹಾಲಪ್ಪ, ಪ್ರಮುಖರಾದ ದೇವೇಂದ್ರಪ್ಪ, ಮಧು, ವಿಶ್ವನಾಥ್ ಕಾಶಿ, ಬಾಬು, ಗಂಗಾಧರ, ಧೀರಾಜ್ ಹೊನ್ನವಿಲೆ, ಶಿವಣ್ಣ ಇನ್ನಿತರರು ಇದ್ದರು.