ಶಿವಮೊಗ್ಗ, ಸೆ.7: ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಲ್ಲಿ 17 ವರ್ಷದ ಹೆಣ್ಣು ಹುಲಿ ‘ದಶಮಿ’ ವಯೋಸಹಜ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದೆ.

ಸೆಪ್ಟೆಂಬರ್ 6ರಂದು ಬೆಳಿಗ್ಗೆ 11.25ಕ್ಕೆ ದಶಮಿ ಮೃತಪಟ್ಟಿದ್ದು, ಮೃಗಾಲಯದ ಪಶುವೈದ್ಯರು ಪರಿಶೀಲನೆ ನಡೆಸಿ ವಯೋಸಹಜವಾದ ಬಹು ಅಂಗಾಂಗ ವೈಫಲ್ಯವೇ ಸಾವಿಗೆ ಕಾರಣ ಎಂದು ದೃಢಪಡಿಸಿದ್ದಾರೆ.

ದಶಮಿಯ ಸಾವಿನ ಕುರಿತು ಕಾನೂನು ಪ್ರಕ್ರಿಯೆಯಂತೆ ಪಶುವೈದ್ಯರ ತಂಡದಿಂದ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಹುಲಿ-ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುಮಾರು 17 ವರ್ಷಗಳ ಕಾಲ ಬದುಕಿದ್ದ ದಶಮಿಯ ಸಾವಿನಿಂದ ಹುಲಿ-ಸಿಂಹಧಾಮದ ಸಿಬ್ಬಂದಿ ಹಾಗೂ ಪ್ರಾಣಿ ಪ್ರಿಯರಲ್ಲಿ ಬೇಸರ ಮೂಡಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಸಾವಿಗೆ ಸಂಬಂಧಿಸಿದ ಅಧಿಕೃತ ವರದಿ ಲಭ್ಯವಾಗಲಿದೆ.