
ಶಿವಮೊಗ್ಗ: ಗಣೇಶೋತ್ಸವದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಸಜ್ಜಾಗಿದೆ. ಹಬ್ಬದ ಸಂದರ್ಭದಲ್ಲಿ ನಡೆಯುವ ಗಣೇಶ ಮೂರ್ತಿ ಪ್ರತಿಷ್ಠಾಪನೆ, ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಮೆರವಣಿಗೆಗಳ ವೇಳೆ ಸಾರ್ವಜನಿಕರ ಸುರಕ್ಷತೆಗೆ ವಿಶೇಷ ಗಮನ ಹರಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಸ್ವಯಂಸೇವಕರಾಗಿ ಕೈಜೋಡಿಸಲು ಅವಕಾಶ ಕಲ್ಪಿಸಲಾಗಿದೆ. ಸೆ.5ರಿಂದ ಸೆ.14ರವರೆಗೆ ನಡೆಯುವ ಗಣೇಶೋತ್ಸವದ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ಸ್ವಯಂಸೇವಕರಾಗಿ ಕರ್ತವ್ಯ ನಿರ್ವಹಿಸಲು ಆಸಕ್ತಿ ಹೊಂದಿರುವವರು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಇಲಾಖೆ ತಿಳಿಸಿದೆ.

ಗಣೇಶೋತ್ಸವ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಸ್ಥಳಗಳಲ್ಲಿ ಜನದಟ್ಟಣೆ ನಿಯಂತ್ರಣ, ಸಂಚಾರ ವ್ಯವಸ್ಥೆ, ಮೆರವಣಿಗೆಯ ವೇಳೆ ಶಿಸ್ತು ಕಾಪಾಡುವುದು ಹಾಗೂ ಸಾರ್ವಜನಿಕರಿಗೆ ಅಗತ್ಯ ಸಹಕಾರ ನೀಡುವ ಕಾರ್ಯಗಳಲ್ಲಿ ಸ್ವಯಂಸೇವಕರು ಪೊಲೀಸರೊಂದಿಗೆ ಕೈಜೋಡಿಸಲಿದ್ದಾರೆ.

ಶಿವಮೊಗ್ಗ ನಗರ ಹಾಗೂ ತಾಲೂಕು, ಭದ್ರಾವತಿ, ಸೊರಬ, ಶಿಕಾರಿಪುರ, ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ವ್ಯಾಪ್ತಿಯಲ್ಲಿ ಸ್ವಯಂಸೇವಕರ ಸೇವೆಯನ್ನು ಬಳಸಿಕೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ.

ಹಬ್ಬವನ್ನು ಸಂಭ್ರಮದಿಂದ ಆಚರಿಸುವುದರ ಜೊತೆಗೆ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಪ್ರೇರಿತರಾಗಿ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸುವಂತೆ ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ.