ಶಿವಮೊಗ್ಗ,ಸೆ.04: ನಗರದಲ್ಲಿ ಕಳೆದ ಎರಡು ದಿನಗಳಿಂದ ಯಾವುದೇ ಮುನ್ಸೂಚನೆ ನೀಡದೆ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.
ಪೂರ್ವ ಮಾಹಿತಿ ನೀಡದೆ ಗಂಟೆಗಟ್ಟಲೇ ಪವರ್ ಕಟ್ ಮಾಡುತ್ತಿರುವ ಮೆಸ್ಕಾಂ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆ ಗುರುವಾರ ಹಾಗೂ ಇಂದಿನ ಶುಕ್ರವಾರ ಸತತವಾಗಿ ಸಂಜೆ ವೇಳೆಯಲ್ಲಿ ಇಡೀ ನಗರದಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾಗಿದೆ.

ಫೀಡರ್ ಬದಲಾವಣೆ ಹಿನ್ನೆಲೆಯಲ್ಲಿ ಪವರ್ ಕಟ್ ಮಾಡಲಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಹೇಳುತ್ತಿದ್ದಾರೆ.
ಸಂಜೆ ವೇಳೆ ನಗರದಲ್ಲಿ ವ್ಯಾಪಾರ ವಹಿವಾಟು ಜೋರಾಗಿರುತ್ತದೆ. ಆದರೆ ಕರೆಂಟ್ ಇಲ್ಲದೆ ವ್ಯಾಪಾರಸ್ಥರು ಸಂಕಷ್ಟಕ್ಕೀಡಾಗಿದ್ದಾರೆ.

ಜನರೇಟರ್ ಮತ್ತು ಯುಪಿಎಸ್ ವ್ಯವಸ್ಥೆ ಇರುವ ಅಂಗಡಿ ಹಾಗೂ ಹೊಟೇಲ್ಗಳಲ್ಲಿ ಮಾತ್ರ ವ್ಯವಹಾರ ನಡೆದಿದ್ದು, ಉಳಿದ ಸಣ್ಣಪುಟ್ಟ ವ್ಯಾಪಾರಿಗಳು ಕತ್ತಲಲ್ಲೇ ವ್ಯಾಪಾರ ಮಾಡುವಂತಾಗಿದೆ.
ಮನೆಗಳಲ್ಲೂ ವಿದ್ಯುತ್ ಇಲ್ಲದೆ ಜನರು ಹೈರಾಣಾಗಿದ್ದಾರೆ. ಪೂರ್ವ ಮಾಹಿತಿ ನೀಡದೆ ಗಂಟೆಗಟ್ಟಲೆ ಪವರ್ ಕಟ್ ಮಾಡುತ್ತಿರುವ ಮೆಸ್ಕಾಂ ಕ್ರಮದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.