ಶಿವಮೊಗ್ಗ: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸಿದ ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಹಗರಣದ ಹಿಂದೆ ಪ್ರಭಾವಿ ರಾಜಕೀಯ ನಾಯಕರ ಕೈವಾಡವಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಪ್ರಕರಣವನ್ನು ತಕ್ಷಣವೇ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಬೇಕು ಎಂದು ಜಾತ್ಯತೀತ ಜನತಾದಳದ (ಜೆಡಿಎಸ್) ಶಿವಮೊಗ್ಗ ಜಿಲ್ಲಾ ಕಾರ್ಯಾಧ್ಯಕ್ಷ ನರಸಿಂಹ ಗಂಧದಮನೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪತ್ರಿಕಾ ವರದಿಗಳಲ್ಲಿ ಬಹಿರಂಗಗೊಂಡಿರುವ ಆರೋಪಗಳನ್ನು ಗಮನಿಸಿದರೆ ಹಗರಣವು ಕೇವಲ ಅಧಿಕಾರಿಗಳು ಮತ್ತು ಮಧ್ಯವರ್ತಿಗಳಿಗೆ ಸೀಮಿತವಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ಮಧ್ಯವರ್ತಿ ಬಸವರಾಜ್ ಕಣ್ಣಾಳೆ ಅವರು, ‘ರಾಜಕೀಯ ನಾಯಕರ ಆಶೀರ್ವಾದದಿಂದಲೇ ಮುಂದೆ ಶಾಸಕನಾಗುತ್ತೇನೆ’ ಎಂದು ಹೇಳಿಕೊಂಡಿರುವುದು ವರದಿಯಾಗಿದ್ದು, ಇದರಿಂದ ಹಗರಣದ ಹಿಂದೆ ಪ್ರಭಾವಿ ರಾಜಕಾರಣಿಗಳ ಸಂಪರ್ಕವಿರುವ ಶಂಕೆ ಮತ್ತಷ್ಟು ಬಲಗೊಂಡಿದೆ ಎಂದು ನರಸಿಂಹ ಗಂಧದಮನೆ ತಿಳಿಸಿದ್ದಾರೆ. ಕೋಟ್ಯಂತರ ರೂಪಾಯಿ ಹಣದ ವಹಿವಾಟು ನಡೆದಿದೆ ಎನ್ನಲಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣದ ಸಂಪೂರ್ಣ ಸತ್ಯ ಹೊರಬರಲು ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಪತ್ರಿಕಾ ವರದಿಗಳಲ್ಲಿನ ಪ್ರಮುಖ ಆರೋಪಗಳು
ಪ್ರಶ್ನೆಪತ್ರಿಕೆ ಸೋರಿಕೆ ಆರೋಪ: ಕೆಪಿಎಸ್ಸಿಯ ಹಿಂದಿನ ಪರೀಕ್ಷಾ ನಿಯಂತ್ರಕ ಹಾಗೂ ಕೆಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ಯಾರ್ ಅವರು ಪತ್ರಿಕೆ ಮುದ್ರಣಕ್ಕೂ ಮುನ್ನವೇ ಶೇ.60ರಷ್ಟು ಪ್ರಶ್ನೆಗಳನ್ನು ಸಿದ್ಧಪಡಿಸಿ ಮಧ್ಯವರ್ತಿಗೆ ನೀಡಿದ್ದರು ಎಂಬ ಆರೋಪ ವರದಿಯಾಗಿದೆ.

ಹುದ್ದೆಗೆ ಕೋಟ್ಯಂತರ ರೂಪಾಯಿ ವಸೂಲಿ: ಪಶುವೈದ್ಯಾಧಿಕಾರಿ ಹುದ್ದೆಗೆ ₹40 ಲಕ್ಷದಿಂದ ₹80 ಲಕ್ಷದವರೆಗೆ ಹಣ ನಿಗದಿಪಡಿಸಲಾಗಿತ್ತು ಮತ್ತು ಪ್ರಶ್ನೆಪತ್ರಿಕೆ ಹಾಗೂ OMR ತಿದ್ದುಪಡಿ ಮಾಡಿಕೊಡುವುದಾಗಿ ಹೇಳಿ 29 ಅಭ್ಯರ್ಥಿಗಳಿಂದ ₹20 ಲಕ್ಷದಿಂದ ₹50 ಲಕ್ಷದವರೆಗೆ ಮುಂಗಡ ಹಣ ಪಡೆದಿದ್ದರು ಎಂಬ ಆರೋಪ ಕೇಳಿಬಂದಿದೆ.
ಅಕ್ರಮವಾಗಿ ಪರೀಕ್ಷೆ ಬರೆಸಿದ ಆರೋಪ: ಹಣ ನೀಡಿದ ಅಭ್ಯರ್ಥಿಗಳನ್ನು ಬೆಂಗಳೂರಿನ ರಾಜಾಜಿನಗರದ ಕಚೇರಿ, ದೇವರಾಯನದುರ್ಗದಲ್ಲಿನ ಮನೆ ಹಾಗೂ ಆಂಧ್ರಪ್ರದೇಶದ ರೆಸಾರ್ಟ್ಗಳಿಗೆ ಕರೆದೊಯ್ದು ಮುಂಚಿತವಾಗಿ ಪರೀಕ್ಷೆ ಬರೆಸಲಾಗಿತ್ತು ಎಂಬ ಆರೋಪವೂ ವರದಿಯಾಗಿದೆ.
ಅಭ್ಯರ್ಥಿಗಳ ಕುಟುಂಬಗಳ ಮೇಲೆ ಆರ್ಥಿಕ ಹೊರೆ: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿ ಬಡ ಹಾಗೂ ಮಧ್ಯಮ ವರ್ಗದ ಅಭ್ಯರ್ಥಿಗಳು ಪೋಷಕರ ಕೃಷಿ ಜಮೀನು ಮಾರಾಟ ಮಾಡುವುದು, ಒಡವೆಗಳನ್ನು ಅಡವಿಡುವುದು ಸೇರಿದಂತೆ ಹಣ ಹೊಂದಿಸಿ ಈ ಜಾಲಕ್ಕೆ ನೀಡಿರುವ ಆರೋಪಗಳು ಆತಂಕಕಾರಿ ಎಂದು ಅವರು ಹೇಳಿದ್ದಾರೆ.

ಜೆಡಿಎಸ್ನ ಪ್ರಮುಖ ಆಗ್ರಹಗಳು
ಹಗರಣದ ಹಿಂದೆ ಇರುವ ಅಧಿಕಾರಿಗಳು, ಮಧ್ಯವರ್ತಿಗಳು ಹಾಗೂ ರಾಜಕೀಯ ನಾಯಕರ ಹೆಸರು ಮತ್ತು ಪಾತ್ರ ಬಹಿರಂಗವಾಗಲು ಪ್ರಕರಣವನ್ನು ಕೂಡಲೇ ಸಿಬಿಐಗೆ ವಹಿಸಬೇಕು.
ಹಗರಣದಲ್ಲಿ ಭಾಗಿಯಾಗಿರುವ ಭ್ರಷ್ಟ ಅಧಿಕಾರಿಗಳು, ದಲ್ಲಾಳಿಗಳು ಹಾಗೂ ಅವರಿಗೆ ರಾಜಕೀಯ ರಕ್ಷಣೆ ನೀಡಿದವರ ವಿರುದ್ಧ ಕಠಿಣ ಕ್ರಿಮಿನಲ್ ಕಾನೂನು ಕ್ರಮ ಕೈಗೊಳ್ಳಬೇಕು.

ಹಗಲಿರುಳು ಕಷ್ಟಪಟ್ಟು ಓದಿ ಪರೀಕ್ಷೆ ಬರೆದ ಅರ್ಹ ಹಾಗೂ ಬಡ ಪ್ರತಿಭಾವಂತ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು.
ನೇಮಕಾತಿ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಬೇಕು.
ರಾಜ್ಯ ಸರ್ಕಾರವು ಹಗರಣದ ಹಿಂದೆ ಇರುವ ರಾಜಕೀಯ ಪ್ರಭಾವಿಗಳನ್ನು ರಕ್ಷಿಸುವ ಬದಲು ಪ್ರಕರಣವನ್ನು ತಕ್ಷಣ ಸಿಬಿಐಗೆ ವಹಿಸಬೇಕು. ಇಲ್ಲವಾದಲ್ಲಿ ನೊಂದಿರುವ ರಾಜ್ಯದ ಯುವಜನತೆಯ ಪರವಾಗಿ ಜೆಡಿಎಸ್ ಬೀದಿಗಿಳಿದು ರಾಜ್ಯವ್ಯಾಪಿ ತೀವ್ರ ಹೋರಾಟ ನಡೆಸಲಿದೆ ಎಂದು ನರಸಿಂಹ ಗಂಧದಮನೆ ಎಚ್ಚರಿಕೆ ನೀಡಿದ್ದಾರೆ.