ಶಿವಮೊಗ್ಗ : ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿರುವ ಗ್ರಾಮಾಂತರ ಠಾಣೆ ಪೊಲೀಸ್ ಈರೇಶ್ ಬಾಬು ಅನ್ನು ಬಂಧಿಸಿ ಸೇವೆಯಿಂದ ವಜಾಗೊಳಿಸಬೇಕೆಂದು ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ಅಧ್ಯಕ್ಷ ವಾಟಾಳ್ ಮಂಜುನಾಥ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಈತನ ವಿರುದ್ದ ಯುವತಿ ದೂರು ನೀಡಿದ್ದು, ಎಫ್ಐಆರ್ ಸಹ ದಾಖಲಾಗಿದೆ. ಈತನನ್ನು ಇದುವರೆಗೆ ಬಂಧಿಸಿಲ್ಲ. ನ್ಯಾಯಾಲಯವು ಸಹ ಬೇಲ್ ನೀಡಿರುವುದರಿಂದ ಪುನಃ ಠಾಣೆಯಲ್ಲಿ ಕೆಲಸಕ್ಕೆ ಹಾಜರಾಗಿರುವುದು ದುರಂತವಾಗಿದೆ ಎಂದರು.
ಯುವತಿ ಮದುವೆಯಾಗು ಎಂದು ಆತನನ್ನು ಒತ್ತಾಯಿಸಿದ್ದಾಗ ಇದನ್ನು ಆತ ನಿರಾಕರಿಸಿದ್ದು, ಆಕೆಗೆ ಜೀವ ಬೆದರಿಕೆ ಹಾಕಿದ್ದಾನೆ. ಜಿಲ್ಲಾ ರಕ್ಷಣಾಧಿಕಾರಿ ಅವರು ಈತನ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು. ಯುವತಿಗೆ ರಕ್ಷಣೆ ನೀಡಬೇಕು. ಸೇವೆಯಿಂದ ಅಮಾನತ್ತು ಮಾಡಬೇಕು. ಆತನ ಮೊಬೈಲ್ ಅನ್ನು ಜಪ್ತಿಮಾಡಬೇಕು. ಈತ ಪೊಲೀಸ್ ಇಲಾಖೆಯಲ್ಲಿ ಸೇವೆ ಮಾಡಲು ಅನರ್ಹ ವ್ಯಕ್ತಿಯಾಗಿದ್ದಾನೆ. ಮದುವೆಯಾಗುವಂತೆ ಯುವತಿ ಒತ್ತಾಯಿಸಿದಾಗ ನಾನು ಇದೇ ರೀತಿ ೨೫ ಯುವತಿಯರ ಜೊತೆಗೆ ಸಂಬಂಧ ಬೆಳೆಸಿಕೊಂಡಿದ್ದೇನೆ. ಯಾರನ್ನೂ ಮದುವೆಯಾಗಲಿ ಎಂದು ಬೆದರಿಕೆ ಹಾಕಿದ್ದಾನೆ. ಆದ್ದರಿಂದ ಈತನನ್ನು ಜಿಲ್ಲಾ ರಕ್ಷಣಾಧಿಕಾರಿಗಳು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರವಿ ಸಾಧುಶೆಟ್ಟಿ, ನಿತೀನ್ ರೆಡ್ಡಿ, ಸತೀಶ್ ಗೌಡ, ಲಿಂಗರಾಜು, ಪರಮೇಶ್, ಸಂತೋಷ್, ಲೋಕೇಶ್ ಇದ್ದರು.