ಶಿವಮೊಗ್ಗ : ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮತ್ತು ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಾಡಪ್ರಭು ಕೆಂಪೇಗೌಡರ 517 ನೇ ಜಯಂತಿ ಮಹೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜೂನ್ 27 ರಂದು ಶನಿವಾರ ಬೆಳಿಗ್ಗೆ 11:30 ರಿಂದ ಶರಾವತಿ ನಗರದಲ್ಲಿರುವ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ವೈವಿಧ್ಯಮಯ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಬಿ. ಎ. ರಮೇಶ್ ಹೆಗಡೆ ಸುದ್ದಿಗೋಷ್ಟಿಯಲ್ಲಿ ವಿವರಿಸಿದರು.
ಅಂದು ಬೆಳಿಗ್ಗೆ ಕುವೆಂಪು ರಂಗಮಂದಿರದಿಂದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದವರೆಗೆ ವಾಹನಗಳ ರಾಜಬೀದಿ ಉತ್ಸವ ನಡೆಯಲಿದ್ದು, ಅತಿಥಿಗಳ ಪೂರ್ಣ ಕುಂಭ ಸ್ವಾಗತ ನಡೆಯಲಿದೆ.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಶ್ರೀ ಶ್ರೀ ನಾದಮಯಾನಂದನಾಥ ಸ್ವಾಮೀಜಿ ಅವರು ಭಾಗವಹಿಸಲಿದ್ದಾರೆ. ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಬಿ. ಎ. ರಮೇಶ್ ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಆರ್. ಎಂ. ಮಂಜುನಾಥ ಗೌಡರು, ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಚೇತನ್ ಕೆ. ಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಚ್. ಎಸ್. ಸುಂದರೇಶ್, ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷರಾದ ಡಾ. ಅಂಶುಮಂತ್, ದಾವಣಗೆರೆ ಡಿ.ಐ.ಜಿ. ಅವರಾದ ರವಿಕಾಂತೇ ಗೌಡರು, ರಾಜ್ಯ ಒಕ್ಕಲಿಗರ ಸಂಘದ ಸದಸ್ಯರು, ಕಾಮಗಾರಿ ಸಮಿತಿ ಅಧ್ಯಕ್ಷರಾದ ಸಿರಿಬೈಲು ಧರ್ಮೇಶ್,ಮಲೆನಾಡು ಕ್ರೆಡಿಟ್ ಸೊಸೈಟಿ ಅಧ್ಯಕ್ಷರು, ಜಾತ್ಯತೀತ ಜನತಾದಳ ಜಿಲ್ಲಾ ಅಧ್ಯಕ್ಷರಾದ ಕೆ. ಎನ್. ರಾಮಕೃಷ್ಣ, ಅಂತರಾಷ್ಟ್ರೀಯ ಖ್ಯಾತ ಉದ್ಯಮಿ ಆಶಾ ಶೇಷಾದ್ರಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಎ.ಬಿ. ಸಂಜಯ್, ಆಹಾರ ಇಲಾಖೆ ಜಂಟಿ ನಿರ್ದೇಶಕರಾದ ಸತೀಶ್ ಡಿ., ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ರಾಘವೇಂದ್ರ ಅವರು ಭಾಗವಹಿಸಲಿದ್ದಾರೆ.

ಎಸ್ಎಸ್ಎಲ್ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಪಡೆದ ಸಮುದಾಯ ಮಕ್ಕಳನ್ನು ಗೌರವಿಸಲಾಗುತ್ತಿದೆ. ಸ್ನಾತಕೋತ್ತರ, ಪದವಿ ತರಗತಿಗಳಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳು, ಬೇರೆ ಬೇರೆ ಕ್ಷೇತ್ರಗಳಲ್ಲಿ ಸೇವೆಸಲ್ಲಿಸಿ ಹೆಸರುಮಾಡಿದವರನ್ನು ಗೌರವಿಸಲಾಗುತ್ತಿದೆ. ಶಿಕ್ಷಣ, ಸಹಕಾರಿ, ಉದ್ಯಮ, ಮಾದ್ಯಮ, ಕೃಷಿ, ರಂಗಭೂಮಿ, ಉದ್ಯೋಗ, ಕ್ರೀಡಾ, ಯೋಧರು, ಸಾಹಿತ್ಯ, ಸಂಗೀತ, ಸಮುದಾಯ ಸೇವೆ ಗುರುತಿಸಿ ವಿಶೇಷ ಆಹ್ವಾನ ನೀಡಲಾಗಿದೆ ಎಂದು ವಿವರಿಸಿದರು.
****************************
ಕಸಾಪ ಅಧ್ಯಕ್ಷ ಡಿ.ಮಂಜುನಾಥಗೆ ಕೆಂಪೇಗೌಡ ಪ್ರಶಸ್ತಿ
ಪ್ರತಿ ವರ್ಷ ಜಿಲ್ಲೆಯ ಓರ್ವ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು, ಈ ಬಾರಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಿ.ಮಂಜುನಾಥ ಅವರಿಗೆ ಕೆಂಪೇಗೌಡ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುತ್ತಿದೆ. ನಾಡಿನಲ್ಲೇ ಅತ್ಯುತ್ತಮ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಿದ ಹೆಗ್ಗಳಿಕೆಗೆ ಪಾತ್ರರಾಗಿ, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಮೂರು ಸಂಘಟನೆಗಳನ್ನು ತಮ್ಮ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಜಿಲ್ಲೆಯ ಸಹೃದಯರ ಮೆಚ್ಚುಗೆಗೆ ಪಾತ್ರರಾದವರು ಡಿ. ಮಂಜುನಾಥ. ಕಳೆದ ಮೂವತ್ತೈದು ವರ್ಷಗಳ ಕನ್ನಡ ಪರ ಚಟುವಟಿಕೆಗಳ ಮೂಲಕ ಸಾವಿರಾರು ಕಾರ್ಯಕ್ರಮಗಳನ್ನು ನಡೆಸಿದವರು. ಅಖಿಲ ಭಾರತ 73 ನೇ ಕನ್ನಡ ಸಾಹಿತ್ಯ ಸಮ್ಮೇಳನ, ಜಿಲ್ಲಾ ಸಮ್ಮೇಳನ, ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ, ಜಿಲ್ಲಾ ಮಟ್ಟದ ಜಾನಪದ ಸಮ್ಮೇಳನ, ಸಾಹಿತ್ಯ ಗ್ರಾಮ ಯೋಜನೆ ಮೂಲಕ ವಿಭಿನ್ನ ಕ್ರಿಯಾಶೀಲ ವ್ಯಕ್ತಿತ್ವವಾಗಿ ಗುರುತಿಸಿಕೊಂಡಿದ್ದಾರೆ ಎಂದು ಒಕ್ಕಲಿಗರ ಸಂಘದ ಅಧ್ಯಕ್ಷರಾದ ರಮೇಶ್ ಹೆಗಡೆ ತಿಳಿಸಿದರು.
****************************
ಸುದ್ದಿಗೋಷ್ಠಿಯಲ್ಲಿ ಡಿ. ಮಂಜುನಾಥ, ಕೆ. ಎನ್. ರಾಮಕೃಷ್ಣ, ಡಾ. ಶಾಂತಾ ಸುರೇಂದ್ರ, ರಾಕೇಶ್ ಗೌಡರು, ಪ್ರತಿಮಾ ಡಾಕಪ್ಪಗೌಡ, ಗೋ. ರಮೇಶ್ ಗೌಡ, ಭಾರತಿ ರಾಮಕೃಷ್ಣ, ರಾಘವೇಂದ್ರ ಗೌಡ, ಗುರುರಾಜ್ ಗೌಡ, ಲಿಂಗರಾಜ್ ಉಪಸ್ಥಿತರಿದ್ದರು.