ಶಿವಮೊಗ್ಗ, ಜೂ.20:
ಒಂದೇ ಒಂದು ಎಂಎಲ್ಎ ಪದವಿ ಉಳಿಸಿಕೊಂಡಿದ್ದ ಅಂದಿನ ಜಿಲ್ಲಾ ಕಾಂಗ್ರೆಸ್ ಸದಾ ಆಕ್ಟಿವ್ ಆಗಿ ಕೆಲಸ ಮಾಡುವ ಮೂಲಕ ಜನರ ಮನ ಗೆದ್ದು ಜಿಲ್ಲೆಯಲ್ಲಿ ಮೂರು ವಿಧಾನಸಭಾ ಕ್ಷೇತ್ರ ಗೆಲ್ಲುವ ಜೊತೆ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವಲ್ಲಿ ಬಹುಮುಖ್ಯ ಕಾಣಿಕೆ ನೀಡಿದ್ದು ಗಮನಿಯ ವಿಷಯವೇ ಹೌದು. ಆದರೆ ಅಧಿಕಾರ ಸಿಕ್ಕಮೇಲೆ ಜಿಲ್ಲಾ ಕಾಂಗ್ರೆಸ್ ಬರೀ ಗುಂಪು ಗುಂಪುಗಳ ನಡುವಿನ ಹೋರಾಟ ಪ್ರತಿಭಟನೆ ಎಂಬ ಮಟ್ಟಿಗೆ ಸೀಮಿತವಾಗಿರುವುದು ಪರಸ್ಪರ ನಂಬಿಕೆಗಳನ್ನೇ ಕಳೆದುಕೊಂಡಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳೇ ಹೇಳುತ್ತಿವೆ.
ಮೊನ್ನೆಯಷ್ಟೇ ಜಿಲ್ಲಾ ಕಾಂಗ್ರೆಸ್ ಸಮಿತಿ ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಪದಗ್ರಹಣ ವಿಚಾರವಾಗಿ ಒಂದಿಷ್ಟು ಫ್ಲೆಕ್ಸಿಗಳನ್ನು ಹಾಗೂ ಪತ್ರಿಕೆಗಳಿಗೆ ಜಾಹೀರಾತುಗಳನ್ನು ನೀಡಿದೆ. ಅದರಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮೂವರ ಫೋಟೋಗಳು ಮಾತ್ರ ಕಂಡುಬರುತ್ತಿದ್ದು, ಬ್ಲಾಕ್ ಕಾಂಗ್ರೆಸ್ ಗಳ ಹಾಗೂ ಮಹಿಳಾ ಕಾಂಗ್ರೆಸ್ ಅಧ್ಯಕ್ಷರ ಫೋಟೋಗಳನ್ನೇ ಮರೆಮಾಚಲಾಗಿದೆ.

ಸದಾ ಆಕ್ಟಿವ್ ಆಗಿ ಇರಬೇಕಿದ್ದ ಜಿಲ್ಲಾ ಕಾಂಗ್ರೆಸ್ ಪಕ್ಷ ಈಗ ಒಂದು ಬಗೆಯಲ್ಲಿ ನಿಂತ ನಿರಂತಾಗಿದೆ ಎಂಬುವುದರಲ್ಲಿ ಎರಡು ಮಾತಿಲ್ಲ.
ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವ ಹೊತ್ತಿನಲ್ಲೂ ಸಹ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಅವರವರ ಪ್ಲೆಕ್ಸಿಗಳನ್ನು ಅವರವರುಗಳೇ ಹಾಕಿಕೊಂಡರು. ಆದರೆ ಜಿಲ್ಲಾ ಕಾಂಗ್ರೆಸ್ ಸಮಿತಿ ಈ ವಿಚಾರವಾಗಿ ಅಷ್ಟೊಂದು ಗಂಭೀರವಾಗಿ ಗಮನಿಸದಿರುವುದು ಹಾಗೂ ಅದಕ್ಕಾಗಿ ಅಭಿನಂದನೆ ಸೂಚಿಸದಿರುವುದು ಪಕ್ಷದೊಳಗಿನ ಒಡಕನ್ನು ಸ್ಪಷ್ಟಪಡಿಸುತ್ತಿದೆ.
ನಾಳೆ ಭಾನುವಾರ ನಡೆಯಲಿರುವ ಪಕ್ಷದ ರಾಜ್ಯ ಅಧ್ಯಕ್ಷ ಹರಿಪ್ರಸಾದ್ ಅವರ ಪದಗ್ರಹಣ ಸಮಾರಂಭದ ಕುರಿತು ಜಿಲ್ಲಾ ಕಾಂಗ್ರೆಸ್ ಸಮಿತಿ ಹೆಸರಲ್ಲಿ ಫ್ಲೆಕ್ಸಿಯನ್ನು ಹಾಕಲಾಗಿದೆ. ಹಿಂದೆ ಆಕ್ಟಿವ್ ಆಗಿದ್ದ ಪಕ್ಷ ಈಗ ಮತ್ತೆ ಎದ್ದಿತ್ತು ಎಂದು ಹೇಳಬಹುದಾದರೂ ಸಹ ಆ ಪಕ್ಷದ ಬ್ಯಾನರ್ ನಲ್ಲಿ ಕೇವಲ ಮೂವರು ಜಿಲ್ಲಾ ಸಮಿತಿಯ ಪ್ರಮುಖರ ಫೋಟೋಗಳನ್ನು ಹಾಕಲಾಗಿದೆ. ಇಲ್ಲಿ ಸಾಕಷ್ಟು ಜನರ ಫೋಟೋಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಗಿದೆ ಎಂಬುದು ಬಹಳಷ್ಟು ನಾಯಕರ ಆರೋಪ. ದುರುದ್ದೇಶದಿಂದ ಇಂತಹ ಕೆಲಸವನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಹೆಸರಿನಲ್ಲಿ ಮಾಡಲಾಗಿದೆ ಎಂಬ ಆರೋಪ ಗಂಭೀರವಾಗಿ ಕೇಳಿ ಬಂದಿದ್ದು ಈ ಬಗ್ಗೆ ರಾಜ್ಯ ಸಮಿತಿಗೆ ಹಾಗೂ ಎಐಸಿಸಿಗೆ ಸಾಕಷ್ಟು ನಾಯಕರು ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಪಕ್ಷ ಬಿಜೆಪಿಯ ಕೆಲವು ನಿಯಮಗಳನ್ನಾದರೂ ಪಾಲಿಸುವ ಯೋಚನೆಯನ್ನಾದರೂ ಮಾಡಬೇಕಿತ್ತು. ಕಾಶ್ಮೀರದಲ್ಲಿ ಯಾರೋ ಬಿಜೆಪಿಯ ನಾಯಕ ಗೆದ್ದರೆ, ಶಿವಮೊಗ್ಗ ಜಿಲ್ಲಾ ಕಚೇರಿಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚುತ್ತಾರೆ ಎಂಬ ವಿಷಯ ಗೊತ್ತಿದ್ದೂ ಸಹ ಮೊನ್ನೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿಯಾಗಿ ಐದು ಸದಸ್ಯರನ್ನು ಆಯ್ಕೆ ಮಾಡಿಕೊಂಡದ್ದು ಮೆಚ್ಚುಗೆಯ ವಿಷಯ ಆಗಿದೆ. ಆದರೆ ಈ ಬಗ್ಗೆ ಸಿಹಿ ಹಂಚುವ ಮಾತಿರಲಿ, ಪಟಾಕಿ ಸಿಡಿಸುವುದನ್ನು ಒತ್ತಟ್ಟಿಗಿಡಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಒಂದಿಷ್ಟು ಜನರನ್ನು ಒಂದಿಷ್ಟು ಪಕ್ಷದ ಕಾರ್ಯಕರ್ತರನ್ನು ಸೇರಿಸಿ ಸರಳ ಸಮಾರಂಭವನ್ನು ಮಾಡಿ ಪಕ್ಷಕ್ಕೆ ಜೈಕಾರ ಹೇಳಬಹುದಿತ್ತು ಎಂಬ ಸೂಕ್ಷ್ಮಪ್ರಜ್ಞೆ ಜಿಲ್ಲಾ ಕಾಂಗ್ರೆಸ್ ಸಮಿತಿಯು ಮರೆತಿದೆ ಎಂಬುದು ಪಕ್ಷದ ಪ್ರಮುಖರ ಬಹುದೊಡ್ಡ ಆರೋಪ.

ನಿನ್ನೆ ಎಲ್ಲಾ ಸ್ಥಳೀಯ ಪತ್ರಿಕೆಗಳಿಗೆ ಜಿಲ್ಲಾ ಕಾಂಗ್ರೆಸ್ ಜಾಹೀರಾತೊಂದನ್ನು ಬಿಡುಗಡೆ ಮಾಡಲಾಗಿದೆ. ಅದೂ ಅತ್ಯಂತ ಕಡಿಮೆ ಬಜೆಟ್ ಲೆಕ್ಕದಲ್ಲಿ, ಅಧಿಕಾರವಿಲ್ಲದಾಗ ದಾರಾಳವಾಗಿದ್ದ ಜಿಲ್ಲಾ ಕಾಂಗ್ರೆಸ್ ಈಗ ಅಧಿಕಾರಕ್ಕೆ ಬಂದ ಮೇಲೆ ಆರ್ಥಿಕವಾಗಿ ಕುಸಿದಿದೆ ಎನಿಸುತ್ತಿದೆ. ಅಯ್ಯೋ ಪಾಪ ಎನ್ನಬೇಕಂತೆ..!
ಈ ಜಾಹೀರಾತಿನಲ್ಲಿ,
ಕೆಲವರಷ್ಟೇ ಜಿಲ್ಲಾ ಕಾಂಗ್ರೆಸ್ಸಿನ ಬ್ಯಾನರ್ ಬಳಸಿಕೊಂಡು ಜಾಹಿರಾತನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಸಿನ ಅಧಿಕೃತ ಆಹ್ವಾನ ಎಂಬಂತೆ ನೀಡಲಾಗಿದೆ. ಈ ಬಗ್ಗೆ ವ್ಯಾಪಕ ಟೀಕೆ- ಟಿಪ್ಪಣಿ ಆರಂಭವಾಗಿದೆ. ಬರೀ ಜಿಲ್ಲಾಧ್ಯಕ್ಷರ ಫೋಟೋ ಇದ್ದಿದ್ದರೆ ಅಧಿಕೃತತೆಯ ಬಗ್ಗೆ ಇಲ್ಲಿ ಪ್ರಶ್ನೆಗಳು ಏಳುತ್ತಿರಲಿಲ್ಲ. ಅಥವಾ ಖಾಸಗಿಯಾಗಿ ಕೆಲವರು ತಮ್ಮ ಮುಖ ಪ್ರಚಾರದ ಕಾರಣಕ್ಕೆ ಖಾಸಗಿಯಾಗಿ ಈ ಜಾಹಿರಾತು ಹಾಕಿಕೊಂಡಿದ್ದರೆ ಅಭ್ಯಂತರವಿರಲಿಲ್ಲ.
ಈ ಜಾಹಿರಾತು, ಬ್ಯಾನರ್ ಅಧಿಕೃತವಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿ, ಶಿವಮೊಗ್ಗ ಎಂದು ಪ್ರಕಟವೂ ಆಗಿದೆ. ಅಂದರೆ ಅವರು ಮೂವರು ಮಾತ್ರ ಪ್ರಮುಖರಾ? ಎಂಬ ಪ್ರಶ್ನೆ ಹುಟ್ಟಿದೆ.
ಅಂದಹಾಗೆ, ಶಿವಮೊಗ್ಗ ಉತ್ತರ- ದಕ್ಷಿಣ ಬ್ಲಾಕ್ ಸೇರಿದಂತೆ ಇಡೀ ಜಿಲ್ಲೆಯಲ್ಲಿ ಬ್ಲಾಕ್ ಅಧ್ಯಕ್ಷರುಗಳಿದ್ದಾರೆ. ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ಇದ್ದಾರೆ. ಇಲ್ಲಿ ಅವರದ್ಯಾವಾ ಫೋಟೋಗಳೂ ಇಲ್ಲ, ಅವರ ಹೆಸರಲ್ಲಿ ಆಹ್ವಾನವೂ ಇಲ್ಲ.
ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬನ್ನಿ ಎಂದು ಬ್ಯಾನರ್- ಜಾಹಿರಾತಿನಲ್ಲಿದೆ. ಈ ಬ್ಯಾನರಿನಲ್ಲಿರುವ ಕೆಲವರು ತಮ್ಮ ಮನೆಯ ಒಬ್ಬೇ ಒಬ್ಬರನ್ನೂ ಈ ಕಾರ್ಯಕ್ರಮಕ್ಕೆ ಕರೆತರುವ ಶಕ್ತಿ, ಸಾಮರ್ಥ್ಯ ಹೊಂದಿದ್ದಾರೆಂದು ಅನಿಸುತ್ತಿಲ್ಲ. ಕಾರ್ಯಕರ್ತರ ಜೊತೆ ಇವರು ಯಾವ ಕಷ್ಟಸುಖಕ್ಕೆ ಸ್ಪಂದಿಸಿದ್ದಾರೆಂದು ಬರುತ್ತಾರೆ ಎಂಬ ದೂರನ್ನು ಕೆಪಿಸಿಸಿಗೆ ಲಿಖಿತವಾಗಿ ನೀಡಲಾಗಿದೆ ಎಂದು ತಿಳಿದುಬರುತ್ತಿದೆ.
ಕ್ರಿಯಾಶೀಲವಾಗಿರುವ ಯುವ ಕಾಂಗ್ರೆಸ್, ಎನ್ ಎಸ್ ಯು ಐ, ಅಲ್ಪಸಂಖ್ಯಾತ, ಪ.ಜಾತಿ, ಪಂಗಡ ಸಮಿತಿಗಳು, ವಿಶೇಷವಾಗಿ ಸೂಡಾ, ಕಾಡಾ, ಎಂಎಡಿಬಿ ಅಧ್ಯಕ್ಷರು, ನಿಗಮ ಮಂಡಳಿ ಅಧ್ಯಕ್ಷರು, ಹಿಂದಿನ ಶಾಸಕ ಸ್ಥಾನದ ಅಭ್ಯರ್ಥಿಗಳು, ಮಾಜಿ ಎಂ.ಪಿ., ಗ್ಯಾರಂಟಿ ಸಮಿತಿ, ಸೇರಿದಂತೆ ಹಲವರ ಪೋಟೋಗಳಿಗಿಲ್ಲಿ ಜಾಗವಿಲ್ಲವಂತೆ.
ಒಟ್ಟಾರೆ, ಕ್ರಿಯಾಶೀಲರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಬೇಕಿದ್ದವರನ್ನು, ಖರ್ಚು ಮಾಡದವರನ್ನು ಅಧ್ಯಕ್ಷರು ಉಳಿಸಿಕೊಂಡಿರೋದೇಕೆ ಎಂಬುದು ಹಲವರ ಗಂಭೀರ ಅಭಿಪ್ರಾಯ.