ಶಿವಮೊಗ್ಗ: ರಾಯಚೂರು ಜಿಲ್ಲೆಯ ಸಿಂಧನೂರಿನ 22 ವರ್ಷದ ಯುವತಿಯೋರ್ವಳು ಕಣ್ಣಿನ ಗಂಭೀರ ಸಮಸ್ಯೆಯಿಂದ ದೃಷ್ಟಿ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದಳು. ಓದುವುದು, ಮೊಬೈಲ್ ನೋಡುವುದು ಹಾಗೂ ದೈನಂದಿನ ಕೆಲಸಗಳನ್ನು ಮಾಡುವುದು ಸಹ ಆಕೆಗೆ ಕಷ್ಟವಾಗಿತ್ತು.
ಅನೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಸಮಸ್ಯೆಗೆ ಪರಿಹಾರ ದೊರೆಯಲಿಲ್ಲ. ನಂತರ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಆಕೆಗೆ “ಕೆರಾಟೋಕೋನಸ್” ಎಂಬ ಕಾರ್ನಿಯಾ ಕಾಯಿಲೆ ಇರುವುದಾಗಿ ಪತ್ತೆಯಾಯಿತು.
ಆಸ್ಪತ್ರೆಯ ಕಾರ್ನಿಯಾ ತಜ್ಞ ಡಾ. ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ಆಕೆಗೆ ಡಾಲ್ಕ್ ಎಂಬ ಸುಧಾರಿತ ಕಾರ್ನಿಯಾ ಕಸಿ ಎರಡೂ ಕಣ್ಣುಗಳಿಗೆ ಎರಡು ಹಂತಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ಶಸ್ತ್ರಚಿಕಿತ್ಸೆಯ ನಂತರ ಆಕೆಯ ದೃಷ್ಟಿಯಲ್ಲಿ ಉತ್ತಮ ಸುಧಾರಣೆ ಕಂಡುಬಂದಿದ್ದು, ಈಗ ಸಾಮಾನ್ಯವಾಗಿ ಓದಲು ಹಾಗೂ ದೂರದ ವಸ್ತುಗಳನ್ನು ನೋಡಲು ಸಾಧ್ಯವಾಗುತ್ತಿದೆ. ಇದರಿಂದ ಆಕೆ ತನ್ನ ಶಿಕ್ಷಣವನ್ನು ಮತ್ತೆ ಮುಂದುವರಿಸುವ ವಿಶ್ವಾಸವನ್ನು ಪಡೆದಿದ್ದಾಳೆ.

ಕೆರಾಟೋಕೋನಸ್ ಸಾಮಾನ್ಯವಾಗಿ ಬಾಲ್ಯ ಅಥವಾ ಹದಿಹರೆಯದಲ್ಲಿ ಆರಂಭವಾಗುವುದರಿಂದ ಮುಂಜಾಗ್ರತೆಯಾಗಿ ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ ಎಂದು ಕಾರ್ನಿಯಾ ತಜ್ಞ ಡಾ. ಮಲ್ಲಿಕಾರ್ಜುನ ತಿಳಿಸಿದ್ದಾರೆ.

1977 ರಲ್ಲಿ ಡಾ. ಆರ್.ವಿ. ರಮಣಿ ಮತ್ತು ಡಾ. ರಾಧಾ ರಮಣಿ ಅವರಿಂದ ಸ್ಥಾಪಿತವಾದ ಶಂಕರ ಐ ಫೌಂಡೇಶನ್ ಇಂಡಿಯಾ ಲಾಭರಹಿತ ಸಂಸ್ಥೆಯಾಗಿದ್ದು, ಬಡ ಮತ್ತು ಹಿಂದುಳಿದ ವರ್ಗಗಳಿಗೆ ಗುಣಮಟ್ಟದ ನೇತ್ರ ಚಿಕಿತ್ಸಾ ಸೇವೆಗಳನ್ನು ಒದಗಿಸುತ್ತಿದೆ. ಆಧುನಿಕ ತಂತ್ರಜ್ಞಾನದ ಮೂಲಕ ವಿವಿಧ ಕಣ್ಣಿನ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ. ಇಂದು ಭಾರತದೆಲ್ಲೆಡೆ 14 ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಗಳ ಮೂಲಕ ಲಕ್ಷಾಂತರ ಜನರಿಗೆ ಸೇವೆ ಸಲ್ಲಿಸುತ್ತಿದೆ. ನೇತ್ರದಾನದ ಮೂಲಕ ಅನೇಕ ಮಂದಿಗೆ ದೃಷ್ಟಿಯನ್ನು ನೀಡಬಹುದಾಗಿರುವುದರಿಂದ ಸಾರ್ವಜನಿಕರು ನೇತ್ರದಾನದ ಬಗ್ಗೆ ಜಾಗೃತಿ ಹೊಂದಬೇಕು ಎಂದು ಕಾರ್ನಿಯಾ ತಜ್ಞ ಡಾ. ಮಲ್ಲಿಕಾರ್ಜುನ ಅವರು ನಾಗರೀಕರಲ್ಲಿ ಮನವಿ ಮಾಡಿದ್ದಾರೆ.