ಶಿವಮೊಗ್ಗ : ಡಿ.ಕೆ.ಶಿವಕುಮಾರ್ ಅವರ ಪ್ರಮಾಣ ವಚನದ ಹಿನ್ನಲೆಯಲ್ಲಿ ನಗರದ ಮಂಜುನಾಥ ಚಿತ್ರಮಂದಿರದಲ್ಲಿ ಹಾಪ್ಕಾಮ್ಸ್ ನಿರ್ದೇಶಕ ಡಾ.ಶರತ್ ಮರಿಯಪ್ಪನವರ ನೇತೃತ್ವದಲ್ಲಿ ಸಾರ್ವಜನಿಕರಿಗೆ ಕಾರ್ಯಕಮದ ನೇರಪ್ರಸಾರ ಹಾಗೂ ಸಿಹಿ ವಿತರಣೆ ಕಾರ್ಯಕ್ರಮ ಭರ್ಜರಿಯಾಗಿ ನಡೆಯಿತು.
ಬೆಂಗಳೂರಿನಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಯುತ್ತಿರುವಂತೆಯೇ ಶಿವಮೊಗ್ಗದ ಮಂಜುನಾಥ ಚಿತ್ರಮಂದಿರದ ದೊಡ್ಡ ಪರದೆಯ ಮೇಲೆ ನೇರಪ್ರಸಾರ ನಡೆದಿದ್ದು ನೇರವಾಗಿಯೇ ನೋಡುತ್ತಿರುವಂತೆ ಸಾರ್ವಜನಿಕರಿಗೆ ಬಾಸವಾಯಿತು. ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ನಂತರ ಪ್ರತಿಯೊಬ್ಬರಿಗೂ ಸಿಹಿ ಹಂಚಲಾಯಿತು. ಅಲ್ಲದೆ ಸಾರ್ವಜನಿಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಡಿ.ಕೆ.ಶಿವಕುಮಾರ್ ಪರ ಘೋಷಣೆ ಕೂಡ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಶರತ್ ಮರಿಯಪ್ಪ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವುದು ನಮ್ಮೆಲ್ಲರಿಗೂ ಹರ್ಷವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂಭ್ರಮಿಸಿದ್ದಾರೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ನಂತರ ಹಲವು ನಿರ್ಧಾರಗಳನ್ನು ತೆಗೆದುಕೊಂಡಿರುವುದು ಸ್ವಾಗತದ ವಿಷಯವಾಗಿದೆ. ಇವರ ಕಾಲದಲ್ಲಿ ನಾಡಿನಲ್ಲಿ ಮಳೆ, ಬೆಳೆ ಚೆನ್ನಾಗಿರಲಿ. ಹಲವು ಕಲ್ಯಾಣ ಕಾರ್ಯಕ್ರಮಗಳು ನಡೆಯಲಿ, ಶಿವಮೊಗ್ಗ ಜಿಲ್ಲೆಗೂ ಹೆಚ್ಚಿನ ಅನುದಾನ ಸಿಗಲಿ ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಪ್ರಮುಖರಾದ ಕೆ.ರಂಗನಾಥ್, ಪ್ರವೀಣ್ಕುಮಾರ್, ಗಿರೀಶ್, ಕೇಶವ, ಮಸ್ಕಾನ್ ಸೇರಿದಂತೆ ನಗರದ ಸಾರ್ವಜನಿಕರು ಭಾಗವಹಿಸಿದ್ದರು.