ಶಿವಮೊಗ್ಗ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಹೆಸರು ಹಾಗೂ ಭಾವಚಿತ್ರ ದುರುಪಯೋಗ ಪಡಿಸಿಕೊಂಡು ಸೈಬರ್ ವಂಚಕರು ನಕಲಿ ವಾಟ್ಸಾಪ್ ಖಾತೆ ತೆರೆದು, ನ್ಯಾಯಾಲಯದ ಸಿಬ್ಬಂದಿ ಮತ್ತು ವಕೀಲರಿಗೆ ಹಣ ಕೋರಿ ಮೆಸೇಜ್ ಕಳುಹಿಸಿರುವ ಘಟನೆ ಬೆಳಕಿಗೆ ಬಂದಿದೆ.
ಮೇ ೨೯ರಂದು ಈ ಘಟನೆ ನಡೆದಿದೆ. ವಿದೇಶಿ ಕೋಡ್ ಹೊಂದಿರುವ ಮೊಬೈಲ್ ಸಂಖ್ಯೆಯ ಮೂಲಕ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್ ಜಿ.ಎ. ಅವರ ಹೆಸರು ಹಾಗೂ ಫೋಟೋ ಬಳಸಿ ನಕಲಿ ವಾಟ್ಸಾಪ್ ಪ್ರೊಫೈಲ್ ಸೃಷ್ಟಿಸಿದ್ದಾರೆ.ಆ ವಾಟ್ಸಪ್ ಮೂಲಕ ನ್ಯಾಯಾಲಯದ ಸಿಬ್ಬಂದಿ ಹಾಗೂ ವಕೀಲರಿಗೆ ಮೆಸೇಜ್ ರವಾನಿಸಿ, ತುರ್ತು ಅಗತ್ಯವಿದೆ ಎಂದು ತಿಳಿಸಿ, ಅದರಲ್ಲಿ ನಮೂದಿಸಲಾಗಿದ್ದ ಬ್ಯಾಂಕ್ ಖಾತೆಗೆ ರೂ.೫೦,೦೦೦ ಹಣವನ್ನು ಕಳುಹಿಸುವಂತೆ ತಿಳಿಸಲಾಗಿತ್ತು. ಮೇ ೩೦ರಂದು ಈ ವಿಷಯವು ಅಧಿಕಾರಿಗಳ ಗಮನಕ್ಕೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನ್ಯಾಯಾಲಯದ ಪ್ರಭಾರ ಮುಖ್ಯ ಆಡಳಿತಾಧಿಕಾರಿ ಶ್ರೀಲಕ್ಷ್ಮಿ ಜಿ.ಎಂ. ಅವರು ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡ ತನಿಖೆ ನಡೆಸುತ್ತಿದ್ದಾರೆ.