ಶಿವಮೊಗ್ಗ : ಮೂರು ಬಾರಿ ಭದ್ರಾವತಿಯ ಜನಪ್ರಿಯ ಶಾಸಕರಾದ ಬಿ.ಕೆ.ಸಂಗಮೇಶ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಹಾಗೂ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷರಾದ ಈಶ್ವರ ಖಂಡ್ರೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಶಿವಮೊಗ್ಗ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಒತ್ತಾಯಿಸಲಾಗಿದೆ.

ಇಂದು ಪತ್ರಿಕಾ ಗೋಷ್ಠಿಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ರುದ್ರಮುನಿ ಆರ್. ಸಜ್ಜನ್ ಅವರು ಮಾತನಾಡಿ, ಸಂಗಮೇಶ್ ಅವರು ಭದ್ರಾವತಿ ನಗರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅಲ್ಲದೆ ಅವರು ಕಳೆದ ಬಾರಿಯೇ ಇನ್ನು ಮುಂದೆ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದರು. ಚುನಾವಣೆಗೂ ಮುನ್ನ ಸ್ವತಃ ಸಿದ್ಧರಾಮಯ್ಯನವರು ಸಂಗಮೇಶ್ ಅವರನ್ನು ಗೆಲ್ಲಿಸಿಕೊಟ್ಟರೆ ಅವರಿಗೆ ಸಚಿವಸ್ಥಾನ ನೀಡುವುದಾಗಿ ಘೋಷಿಸಿದ್ದರು. ಆದರೆ ಅಂದಿನ ಪರಿಸ್ಥಿತಿಯಲ್ಲಿ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಈಗ ಇನ್ನುಳಿದ 2ವರ್ಷಕ್ಕಾದರೂ ಸಚಿವ ಸ್ಥಾನ ನೀಡಲೇಬೇಕೆಂದು ಪಕ್ಷಾತೀತವಾಗಿ ಮಹಾಸಭಾ ಒತ್ತಾಯಿಸುತ್ತದೆ. ಹಾಗೆಯೇ ಅರಣ್ಯ ಇಲಾಖೆಯ ಸಚಿವರಾಗಿ ಅತ್ಯುತ್ತಮ ಕಾರ್ಯನಿರ್ವಹಿಸಿ ಜನಪ್ರೀಯ ಸಚಿವರಾದ ಈಶ್ವರ ಖಂಡ್ರೆ ಅವರು ಪಕ್ಷದ ಹಿರಿಯ ನಾಯಕರಾಗಿದ್ದು, ಅವರಿಗೆ ಡಿಸಿಎಂ ಸ್ಥಾನ ನೀಡಬೇಕೆಂದು ಮಹಾಸಭಾ ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಅನಿತಾ ರವಿಶಂಕರ್, ಪ್ರಮುಖರಾದ ಚಂದ್ರಶೇಖರ ಮಂಚಾಲಿ, ದಿನೇಶ್, ಅನಿಲ್ಕುಮಾರ್, ವಾಗ್ಧೇವಿ, ಮಲ್ಲಿಕಾರ್ಜುನ ಕಾನೂನು, ಲಕ್ಷ್ಮೀ ಪೂಜಾರ್, ಸುನೀತಾ ದಿನೇಶ್, ಸಚ್ಚಿನ್ ಪೂಜಾರಿ ಮತ್ತಿತರರಿದ್ದರು.