ಶಿವಮೊಗ್ಗ : ಮಧು ಬಂಗಾರಪ್ಪನವರ ಕನಸಿನ ಬಹುನಿರೀಕ್ಷಿತ ಕರ್ನಾಟಕ ಪಬ್ಲಿಕ್ ಸ್ಕೂಲ್ ಉದ್ಘಾಟನಾ ಸಮಾರಂಭ ಶಿವಮೊಗ್ಗದಿಂದಲೇ ಜೂನ್ ೧ರಂದು ಮುಖ್ಯಮಂತ್ರಿಗಳಿಂದ ಉದ್ಘಾಟನೆಗೊಳ್ಳಬೇಕಿತ್ತು. ಇದಕ್ಕಾಗಿ ನಗರದ ಅಲ್ಲಮಪ್ರಭು ಮೈದಾನದಲ್ಲಿ ಕಳೆದ ೫ದಿನಗಳಿಂದ ದೊಡ್ಡಮಟ್ಟದಲ್ಲಿ ಬೃಹತ್ ಪೆಂಡಾಲನ್ನು ನಿರ್ಮಿಸಿ, ಲಕ್ಷಾಂತರ ರೂ. ವೆಚ್ಚಮಾಡಲಾಗಿತ್ತು. ಆದರೆ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ನೀಡಿದ್ದರಿಂದ ಈಗ ಈ ಉದ್ಘಾಟನಾ ಸಮಾರಂಭ ಅತಂತ್ರಸ್ಥಿತಿಯಲ್ಲಿದ್ದು, ಗುತ್ತಿಗೆದಾರ ಪೆಂಡಾಲ್ ಕಳಚುತ್ತಿದ್ದಾರೆ.

ನೂತನ ಮುಖ್ಯಮಂತ್ರಿಗಳು ಯಾವಾಗ ಅಧಿಕಾರ ಸ್ವೀಕರಿಸುತ್ತಾರೆ ? ಯಾವಾಗ ಸಂಪುಟ ವಿಸ್ತರಣೆ ಮಾಡುತ್ತಾರೆ ಎಂದು ಇನ್ನೂ ನಿಗಧಿಯಾಗದೆ ಇರುವ ಕಾರಣ ಸಮಾರಂಭ ಮುಂದೂಡುವ ಸ್ಪಷ್ಟ ಸೂಚನೆ ಲಭಿಸಿದ್ದು ಸಚಿವರ ಮಹತ್ವಾಕಾಂಕ್ಷೆಯ ಸಮಾರಂಭಕ್ಕೆ ಹಿನ್ನಡೆಯಾಗಿದೆ.

ರಾಜ್ಯದಲ್ಲಿ ಒಂದು ಸಾವಿರ ಕರ್ನಾಟಕ ಪಬ್ಲಿಕ್ ಶಾಲೆ ಆರಂಭವಾಗಲಿದ್ದು, ಶಿಕ್ಷಣ ಸಚಿವರ ತವರು ಶಿವಮೊಗ್ಗ ಜಿಲ್ಲೆಯಿಂದಲೇ ಅದ್ಧೂರಿಯಾಗಿ ಉದ್ಘಾಟನೆಗೊಳ್ಳಬೇಕಿತ್ತು. ಇಡೀ ಸಚಿವ ಸಂಪುಟವೇ ಭಾಗಿಯಾಗುವ ನಿರೀಕ್ಷೆಯಿತ್ತು. ಶಿವಮೊಗ್ಗದ ಜನರು ಕೂಡ ಕಾತುರತೆಯಿಂದ ಕಾಯುತ್ತಿದ್ದರು. ಆದರೆ ರಾಜಕೀಯ ತಲ್ಲಣ ಶಿವಮೊಗ್ಗದ ಜನರಲ್ಲಿ ನಿರಾಶೆ ಮೂಡಿಸಿದ್ದು ಈ ಸಮಾರಂಭ ಬಹುತೇಕ ಮುಂದೂಡುವುದು ಖಚಿತ ಎಂದು ಮೂಲಗಳು ತಿಳಿಸಿದೆ.