ಬೆಂಗಳೂರು: ನನಗೆ ಯಾವುದೇ ನೋವಿಲ್ಲ, ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.
ಇಂದು ಬೆಳಗ್ಗೆ ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆದ ಉಪಾಹಾರ ಕೂಟಕ್ಕೆ ಸಂಪುಟದ ಎಲ್ಲಾ ಸಚಿವರು ಹಾಜರಾಗಿದ್ದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಿನ್ನೆ ರಾತ್ರಿ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿ ಇಂದು ಬೆಳಗ್ಗೆ ಉಪಾಹಾರ ಕೂಟದಲ್ಲಿ ಭಾಗವಹಿಸಿದ್ದರು.
ಡಿ.ಕೆ.ಶಿವಕುಮಾರ್ ಆಗಮಿಸುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆತೀಯವಾಗಿ ಬರಮಾಡಿಕೊಂಡರು. ಈ ವೇಳೆ ಭಾವೋದ್ವೇಗಕ್ಕೆ ಒಳಗಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ.
ಉಪಾಹಾರದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಸಚಿವರನ್ನು ಉದ್ದೇಶಿಸಿ ಔಪಚಾರಿಕವಾಗಿ ಮಾತನಾಡಿದ್ದು, ಈವರೆಗೂ ಉತ್ತಮ ಆಡಳಿತ ನೀಡಲು ಸಹಕರಿಸಿದ್ದಕ್ಕಾಗಿ ಧನ್ಯವಾದ ಹೇಳಿದ್ದಾರೆ. ರಾಜಕಾರಣಕ್ಕೆ ಹೊಸ ಮುಖಗಳು, ಹೊಸ ಆಲೋಚನೆಗಳು ಬರಬೇಕು. ಜನ ಕಾಂಗ್ರೆಸ್ ಪಕ್ಷದ ಮೇಲೆ ಅಪಾರ ವಿಶ್ವಾಸ ಇರಿಸಿದ್ದು, ಅದನ್ನು ಮುಂದಿನ ದಿನಗಳಲ್ಲಿ ಉಳಿಸಿಕೊಳ್ಳಬೇಕು. ಕೋಮುವಾದಿ ಹಾಗೂ ವಿಚ್ಛಿದ್ರಕಾರಿ ಶಕ್ತಿಗಳು, ಜನರ ಶಾಂತಿ, ನೆಮದಿ ಕೆಡಿಸಲು ಅವಕಾಶ ನೀಡಬಾರದು ಎಂದು ಸಲಹೆ ನೀಡಿದ್ದಾರೆ.
ತಾವು ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುತ್ತೇನೆ. ದೈಹಿಕ ಸಾಮರ್ಥ್ಯ ಇರುವವರೆಗೂ ಜನರ ಸೇವೆ ಮಾಡುತ್ತೇನೆ. ರಾಜಕೀಯವಾಗಿ ನನಗೆ ಈವರೆಗೂ ಸಹಕಾರ, ಸಲಹೆ ನೀಡಿದ ಎಲ್ಲರನ್ನು ಸರಿಸಿಕೊಳ್ಳುವುದಾಗಿ ಹೇಳಿದ್ದಾರೆ.