ಶಿವಮೊಗ್ಗ: ನಗರದ ಹೊರವಲಯದ ಗೋಪಾಳದಲ್ಲಿರುವ ಆಹಾರ ಇಲಾಖೆ ಕಚೇರಿಯನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಶಿವಮೊಗ್ಗ ನಗರದ ಮಧ್ಯಭಾಗಕ್ಕೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಪದಾಧಿಕಾರಿಗಳು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ನಮ್ಮ ಸಂಘಟನೆಯು ಕಳೆದ ೬ ತಿಂಗಳಿಂದ ಈ ಕುರಿತು ಸತತವಾಗಿ ಪ್ರಯತ್ನ ಪಡುತ್ತಿದ್ದು, ಆಹಾರ ಇಲಾಖೆಯ ಉಪ ನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರು ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದನ್ನು ಪ್ರತಿಭಟಿಸಿ ಈಗಾಗಲೇ ಕೈಗೆ ಕಪ್ಪು ಬಟ್ಟೆ ಧರಿಸಿ ತೀವ್ರ ಪ್ರತಿಭಟನೆ ವ್ಯಕ್ತಪಡಿಸಲಾಗಿದೆ. ನಗರದಿಂದ ೫-೬ ಕಿ.ಮೀ. ದೂರದಲ್ಲಿರುವ ಗೋಪಾಳದ ಆಹಾರ ಇಲಾಖೆ ಕಚೇರಿಗೆ ಸಾರ್ವಜನಿಕರು, ಹಿರಿಯ ನಾಗರಿಕರು, ಮಹಿಳೆಯರು, ವಿಕಲಚೇತನರು ತಮ್ಮ ದೈನಂದಿನ ಕಾರ್ಯಕ್ಕೆ ಅಲ್ಲಿಗೆ ಹೋಗಿ ಬರಲು ಸರಿಯಾದ ನಗರ ಸಾರಿಗೆ ಬಸ್ ಗಳ ವ್ಯವಸ್ಥೆ ಇಲ್ಲ. ಆಟೋ ಹಿಡಿದು ಹೋಗಿ ಬರಬೇಕೆಂದರೆ ಕನಿಷ್ಠ ೫೦೦-೬೦೦ ರೂ. ಭರಿಸಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ಸರ್ಕಾರ ಅನರ್ಹ ಬಿಪಿಎಲ್ ಕಾರ್ಡ್ಗಳ ಪರಿಷ್ಕರಣೆ ಅಭಿಯಾನ ಕೈಗೊಂಡಿದ್ದು, ನೂರಾರು ಬಿಪಿಎಲ್ ಕಾರ್ಡ್ಗಳು ಎಪಿಎಲ್ ಗೆ

ಪರಿವರ್ತನೆಯಾಗಿವೆ. ಈ ಮಾಹಿತಿ ಅನೇಕರಿಗೆ ಇನ್ನೂ ತಿಳಿದಿಲ್ಲ. ಬಹುತೇಕರ ಕಾರ್ಡ್ಗಳೇ ರದ್ದಾಗಿವೆ. ಇದನ್ನು ತಿಳಿಯಲು ಗೋಪಾಳಕ್ಕೆ ಅಲೆದಾಡಬೇಕಾಗಿದೆ. ಆಹಾರ ಇಲಾಖೆ ಉಪನಿರ್ದೇಶಕ, ಸಹಾಯಕ ನಿರ್ದೇಶಕರು ಅವರ ದಿವ್ಯ ನಿರ್ಲಕ್ಷ್ಯಕ್ಕೆ ಟ್ರಸ್ಟ್ ಆಕ್ರೋಶ ವ್ಯಕ್ತಪಡಿಸಿದೆ.
ಈ ಸಂದರ್ಭದಲ್ಲಿ ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಪ್ರಮುಖರಾದ ಹೆಚ್.ಎಂ. ಸಂಗಯ್ಯ, ಅಲೀಂ ಖಾನ್, ಶಂಕ್ರಾನಾಯ್ಕ್, ಆದಿಶೇಷ ಎಲ್., ರಾಮು ಹೆಚ್., ಚಂದ್ರಪ್ಪ ಟಿ., ಪಿ.ಡಿ. ಮಂಜಪ್ಪ, ಕೋಡ್ಲು ಶ್ರೀಧರ್ ಮೊದಲಾದವರು ಇದ್ದರು.