ಶಿವಮೊಗ್ಗ : ರಾಮನಗರ ಜಿಲ್ಲೆಯ ಬಿಡದಿ ಟೌನ್ಶಿಪ್ ಯೋಜನೆಗೆ ನೀಡಿರುವ ಸಂಪುಟದ ಅನುಮೋದನೆಯನ್ನು ವಾಪಾಸ್ ಪಡೆಯಬೇಕು ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಆಗ್ರಹಿಸಿದರು.
ಅವರು ಇಂದು ರೈತಸಂಘ, ಹಸಿರುಸೇನೆ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತ ಹೋರಾಟ ಸಮಿತಿವತಿಯಿಂದ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಡದಿ ಟೌನ್ಶಿಪ್ ಯೋಜನೆ ರೈತವಿರೋಧಿಯಾಗಿದೆ. ಜೀವ ಪರಿಸರ ವ್ಯವಸ್ಥೆಗೆ ವಿನಾಶಕಾರಿಯಾಗಿದೆ. ಸುಮಾರು 9640 ಎಕರೆ ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ. ಈಗಾಗಲೇ ಸಂಪುಟ ಅನುಮೋದನೆ ಕೂಡ ಮಾಡಿದೆ. ಇದನ್ನು ಸರ್ಕಾರ ಕೂಡಲೇ ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಮುಖ್ಯವಾಗಿ ಬಿಡದಿ ಹೋಬಳಿ, ಬೈರಹೊಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾ.ಪಂ.ವ್ಯಾಪ್ತಿಯ 25 ಗ್ರಾಮಗಳ ಕೃಷಿಭೂಮಿ ಇದು. ನೀರಾವರಿ ಜಮೀನಾಗಿದೆ ತೆಂಗು, ಅಡಿಕೆ, ಬಾಳೆ, ಮಾವು ಸೇರಿದಂತೆ ತೋಟಗಾರಿಕೆ ಬೆಳೆ ಕೂಡ ಇಲ್ಲಿದೆ. ಇದು ಸಮೃದ್ಧ ಹಸಿರಿನ ಪ್ರದೇಶವಾಗಿದೆ. ಇಂತಹ ಭೂಮಿಯಲ್ಲಿ ಟೌನ್ಶಿಪ್ ಮಾಡುವುದು ಸರಿಯಲ್ಲ, ಇದು ರೈತರ ಪ್ರಜಾಪ್ರಭುತ್ವ ಹಕ್ಕುಗಳು ಉಲ್ಲಂಘನೆ ಹಾಗೂ ಸರ್ಕಾರದ ಸರ್ವಾಧಿಕಾರಿತನವಾಗಿದೆ ಮತ್ತು ರೀಯಲ್ ಎಸ್ಟೇಟ್ ದಂಧೆಗೆ ದಾರಿಯಾಗುತ್ತದೆ. ಈಗಾಗಲೇ ಇದನ್ನು ಪರಿಸರ ವಿರೋಧಿಗಳು, ಸಾಹಿತಿಗಳು ಮತ್ತು ರೈತ ಸಂಘದ ಸಂಯುಕ್ತ ಹೋರಾಟ ಒಕ್ಕೂಟ ಕೂಡ ಖಂಡಿಸುತ್ತದೆ. ರೈತರು ಕೂಡ ತಿಂಗಳುಗಳಿಂದ ಹೋರಾಟ ನಡೆಸುತ್ತಲೇ ಬಂದಿದ್ದಾರೆ ಎಂದರು.

ಇದರ ಜೊತೆಗೆ 2012ರಲ್ಲಿ ಕೆ.ಐ.ಎ.ಡಿ.ಬಿ. ಮೂಲಕ ಕೈಗಾರಿಕಾ ಸ್ಥಾಪನೆಗಾಗಿ ಮಿಥಲ್ ಕಂಪನಿಗಾಗಿ ಅಂದಿನ ಸರ್ಕಾರ 12,500 ಎಕರೆ ರೈತರ ಭೂಮಿಯನ್ನು ಬಲವಂತವಾಗಿ ವಶಕ್ಕೆ ಪಡೆದಿತ್ತು. ಆದರೆ 15ವರ್ಷವಾದರೂ ಯಾವುದೇ ಕೈಗಾರಿಕೆಯನ್ನು ಅಲ್ಲಿ ಸ್ಥಾಪಿಸಿಲ್ಲ. ಅದರ ಬದಲು ಈ ಭೂಮಿಯನ್ನು ಒಳಿಒಪ್ಪಂದವಾಗಿ ಅನ್ಯ ಉದ್ದೇಶಕ್ಕಾಗಿ ಜಿಂದಾಲ್ ಕಂಪನಿಗೆ ಮಾರಾಟ ಮಾಡಲು ಹೊರಟಿರುವುದು ಕಾನೂನುಬಾಹಿರ ಹಾಗೂ ಭ್ರಷ್ಟಾಚಾರದ ಕೃತ್ಯ ಎಂದ ಅವರು, ಹೋರಾಟನಿರತ ರೈತರ ಮೇಲೆ ಪೊಲೀಸ್ ದೌರ್ಜನ್ಯ ತಕ್ಷಣವೇ ನಿಲ್ಲಬೇಕು. ರೈತರಿಗೆ ಭೂಮಿಯನ್ನು ವಾಪಾಸ್ ಮಾಡಬೇಕು ಎಂದರು.
ಮೈಸೂರು ನಗರದಿಂದ ದೂರ ಇರುವ ವರುಣಾ ಹೋಬಳಿಯ ಗುಡಮಾದನಹಳ್ಳಿ ಗ್ರಾಮದ ನೀರಾವರಿ ಕೃಷಿಭೂಮಿಯಲ್ಲಿ ರೈತರನ್ನು ಒಕ್ಕಲೆಬ್ಬಿಸಿ, ನಿಮಾನ್ಸ್ ಆಸ್ಪತ್ರೆ ನಿರ್ಮಿಸುವ ಪ್ರಸ್ತಾಪವನ್ನು ಕೂಡಲೇ ಕೈಬಿಡಬೇಕು. ಮೈಸೂರಿನಲ್ಲಿಯೇ ಸಾಕಷ್ಟು ಸರ್ಕಾರಿ ಭೂಮಿ ಇದೆ. ಅಲ್ಲಿ ಆಸ್ಪತ್ರೆಯನ್ನು ನಿರ್ಮಿಸಲಿ ಎಂದರು.
ಮಂಗಳೂರಿನಲ್ಲಿ ಹೈಕೋರ್ಟ್ಪೀಠ ಸ್ಥಾಪನೆಯಾಗುವುದಾಗಿ ತಿಳಿದುಬಂದಿದೆ. ಆದರೆ ಶಿವಮೊಗ್ಗದ ಜನರಿಗೆ ಇದು ತುಂಬಾ ಅನಾನುಕೂಲವಾಗುತ್ತದೆ. ಮಂಗಳೂರಿನಲ್ಲಿಯೇ ಹೈಕೋರ್ಟ್ ಪೀಠ ಆಗುವುದಾದರೆ ಯಾವುದೇ ಕಾರಣಕ್ಕೂ ಶಿವಮೊಗ್ಗ ಜಿಲ್ಲೆಯನ್ನು ಮಂಗಳೂರು ಪೀಠಕ್ಕೆ ವರ್ಗಾಯಿಸಬಾರದು. ಬೆಂಗಳೂರೇ ಇರಲಿ, ಆದರೆ ಶಿವಮೊಗ್ಗದಲ್ಲಿ ಹೈಕೋರ್ಟ್ಪೀಠ ಸ್ಥಾಪನೆಯಾಗಬೇಕು ಎಂಬುದು ನಮ್ಮೆಲ್ಲರ ಆಗ್ರಹವಾಗಿದೆ ನಿನ್ನೆಯಿಂದ ಶಿವಮೊಗ್ಗದಲ್ಲಿ ವಕೀಲರ ಸಂಘ ಆರಂಭಿಸಿರುವ ಹೈಕೋರ್ಟ್ ಪೀಠ ಸ್ಥಾಪನೆಯ ಹೋರಾಟಕ್ಕೆ ರೈತಸಂಘ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು ನಾವು ಕೂಡ ಧರಣಿಯಲ್ಲಿ ಪಾಲ್ಗೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಶಿವಮೊಗ್ಗವನ್ನು ಮಂಗಳೂರು ಹೈಕೋರ್ಟ್ ಪೀಠವಾದರೆ ಸೇರ್ಪಡೆಯಾಗಲು ನಾವು ಬಿಡುವುದಿಲ್ಲ ಉಗ್ರ ಹೋರಾಟ ಮಾಡುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಎಂ.ನಾರಾಯಣ, ಟಿ.ಹೆಚ್.ಹಾಲೇಶಪ್ಪ, ಹನುಮಮ್ಮ, ಟಿ.ಎಂ.ಚಂದ್ರಪ್ಪ, ಸಿ.ಚಂದ್ರಪ್ಪ, ಹನುಮಂತಪ್ಪ, ಷಣ್ಮುಖಪ್ಪ, ಮಂಜಪ್ಪ ಮುಂತಾದವರಿದ್ದರು.