ಶಿವಮೊಗ್ಗ, ಮೇ.೧೫:
ಭದ್ರಾವತಿ ತಾಲ್ಲೂಕು ಕಸಬಾ ೨ನೇ ಹೋಬಳಿಗೆ ಸೇರಿದ ಹುಣಸೆಕಟ್ಟೆ ಗ್ರಾಮದ ಬಿಬಿ ಮೈನ್ಸ್ನ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ೯೪ಸಿ ಹಕ್ಕುಪತ್ರ ತಯಾರಿಸಿ ತಹಶೀಲ್ದಾರರ ಸಹಿ ಮತ್ತು ಮೊಹರು ಫೋರ್ಜರಿ ಮಾಡಿ ಈ ಸ್ವತ್ತು ವಿತರಣೆ ಮಾಡಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ, ಬಯಲಾಟ ಜೀವಮಾನ ಸಾಧನೆ ಪ್ರಶಸ್ತಿ ಪಡೆದ ಪರಿಸರ ಶಿವರಾಂ ಒತ್ತಾಯಿಸಿದರು.
ಅವರ ಇಂದು ಬೆಳಗ್ಗೆ ಸುದ್ದಿಗೋಷ್ಠಯಲ್ಲಿ ಮಾತನಾಡುತ್ತಾ, ೧೩-೦೪-೨೦೨೬ರಂದು ತಹಶೀಲ್ದಾರ್ ಅವರಿಂದ ಹಿಡಿದು ೧೧ ಹಿರಿಯ ಅಧಿಕಾರಿಗಳಿಗೆ ಲಿಖಿತ ಪತ್ರದ ಮೂಲಕ ದಾಖಲೆ ಸಹಿತ ದೂರು ನೀಡಿದ್ದರೂ ಇಲ್ಲಿಯವರೆಗೂ ಯಾವುದೇ ತನಿಖೆ ನಡೆಸದೆ ದಿವ್ಯ ಮೌನಕ್ಕೆ ಜಾರಿರುವುದು ಹಲವು ಅನುಮಾನಗಳಿಗೆ ಎಡೆಮಾಡಕೊಟ್ಟಿದೆ ಎಂದು ಆರೋಪಿಸಿದರು.

೨೦೧೭ರ ಜನವರಿ ತಿಂಗಳಿನಿಂದ ಡಿಸೆಂಬರ್ ತಿಂಗಳವರೆಗೂ ನೂರಾರು ನಕಲಿ ಹಕ್ಕು ಪತ್ರಗಳು ವಿತರಣೆಯಾಗಿವೆ. ಆದರೆ ತಹಶೀಲ್ದಾರರು ನಮ್ಮಕಛೇರಿಯಿಂದ ೯೪ ಸಿ ಅಡಿ ಯಾವುದೇ ದಾಖಲೆ ನೀಡಿಲ್ಲ ಎಂದು ಹಿಂಬರಹ ನೀಡಿದ್ದರೂ ಈ ಫೋರ್ಜರಿ ವಿಷಯದ ಬಗ್ಗೆ ದೂರು ಹಾಗೂ ಕ್ರಮ ಕೈಗೊಳ್ಳದೇ ಇರುವುದರ ಹಿನ್ನಲೆಯಾದರೂ ಏನು ಎಂದರು.

ಇಲ್ಲಿಯವರೆಗೂ ಜಿಲ್ಲಾಧಿಕಾರಿ, ಜಿ.ಪಂ.ಸಿಇಒ, ಅರಣ್ಯ ಇಲಾಖೆಯ ಸಂರಕ್ಷಣಾಧಿಕಾರಿ, ಸಿಸಿಎಫ್ ಸೇರಿದಂತೆ ಹಲವರಿಗೆ ದೂರು ನೀಡಿದರೂ ಸಹ ಸರ್ಕಾರದ ಯಾವುದೇ ಅಧಿಕಾರಿಗಳು ಕ್ರಮಕೈಗೊಳ್ಳದಿರುವುದು ದುರಂತವೇ ಹೌದು. ಈ ಕೂಡಲೇ ಸೂಕ್ತ ಕಾನೂನು ಕ್ರಮಕೈಗೊಂಡು ಕಾರಣಕರ್ತರ ವಿರುದ್ಧ ೪೨೦ ಪ್ರಕರಣ ದಾಖಲಿಸುವಂತೆ ದಾಖಲೆ ಸಹಿತವಾಗಿ ಪರಿಸರ ಶಿವರಾಂ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ನರೇಂದ್ರ, ಮೋಹನ್ ಕುಮಾರ್, ಶಿವರಾಜ್ ಇದ್ದರು.

ದಿಢೀರನೇ ಕೃಷಿಕರಾದ ವೈದ್ಯರಿಂದ ಸರ್ಕಾರಿ ಜಾಗ ಮತ್ತೆ ಒತ್ತುವರಿ
ಇದೇ ಹುಣಸೆಕಟ್ಟೆ ಗ್ರಾಮದ ಸರ್ವೇ ನಂ.೪೨ರಲ್ಲಿ ಭದ್ರಾವತಿ ವೈದ್ಯರೊಬ್ಬರು ಹಾಗೂ ಅವರ ಸಹೋದರ ಸರ್ಕಾರಿ ಜಾಗ ಎರಡು ಎಕರೆ ಜಮೀನನ್ನು ವಶಕ್ಕೆ ಪಡೆದಿದ್ದು, ಅದನ್ನು ಹಿಂದೆ ಜಿಲ್ಲಾಧಿಕಾರಿಗಳು ತೆರವುಗೊಳಿಸಿ ಗ್ರಾಮ ಪಂಚಾಯಿತಿ ನೀಡಿದ್ದರು ಸಹ ಒಂದು ವರ್ಷಗಳ ಕಾಲ ಸುಮ್ಮನಿದ್ದ ಅವರ ಈಗ ೦೭-೦೪-೨೦೨೬ರಂದು ರಾತ್ರೋರಾತ್ರಿ ಕೆಲವು ಗೂಂಡಾಪಡೆಯೊಂದಿಗೆ ಬಂದು ಸರ್ಕಾರಿ ಗೋಮಾಳಕ್ಕೆ ಅತಿಕ್ರಮ ಪ್ರವೇಶ ಮಾಡಿ ಬೇಲಿ ಕಟ್ಟಿ ಬಾಳೆಗಿಡ, ಗೋಡಂಬಿ ನೆಟ್ಟಿದ್ದಾರೆ ಎಂದು ಪರಿಸರ ಶಿವರಾಂ ಆರೋಪಿಸಿದ್ದಾರೆ.
ಈ ಹಿಂದೆ ಈ ಜಮೀನಿನ ವಿಷಯಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತರಿಂದ ನೋಟೀಸ್ ಜಾರಿಯಾಗಿದ್ದರಿಂದ ಹಾಗೂ ಜಿಲ್ಲಾಧಿಕಾರಿಗಳು ಕ್ರಮಕೈಗೊಂಡಿದ್ದರಿಂದ ಸುಮ್ಮನಿಂದ ಈ ವ್ಯಕ್ತಿ ಮತ್ತೆ ಅಕ್ರಮ ಪ್ರವೇಶ ಮಾಡಿದ್ದಾರೆ. ಈ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.