ಶಿವಮೊಗ್ಗ: ಗೋಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವ ಉದ್ಧೇಶದಿಂದ ಗೋವರ್ಧನ ಟ್ರಸ್ಟ್ ನಗರದ ಹೊರವಲಯ ಅಬ್ಬಲಗೆರೆಯಲ್ಲಿ ಮೇ ೧೫ರಂದು ಬೆಳಿಗ್ಗೆ ೧೧ ಗಂಟೆಗೆ ವಿಶ್ವಬಂಧು ಎಂಬ ನೂತನ ಗೋಶಾಲೆಯನ್ನು ಆರಂಭಿಸುವುದರ ಜೊತೆಗೆ ಸಾವಯವ ಕೃಷಿಕರ ಟ್ರಸ್ಟ್ನ ಉದ್ಘಾಟನಾ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ, ಗೋವರ್ಧನ ಟ್ರಸ್ಟ್ ನ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಬ್ಬಲಗೆರೆಯ ಓಂಪ್ರಕಾಶ್ ಅವರ ತೋಟದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯವನ್ನು ವಹಿಸಲಿದ್ದಾರೆ. ನೂತನ ಗೋಶಾಲೆಗೆ ಶ್ರೀ ಮಠದಿಂದ ೨೫ ಮಲೆನಾಡುಗಿಡ್ಡ ತಳಿಯ ಹಸುವನ್ನು ಆರಂಭಿಕವಾಗಿ ಕೊಡುಗೆ ನೀಡುತ್ತಿದ್ದಾರೆ ಎಂದ ಅವರು ಗೋರಕ್ಷಣೆಯ ಧ್ಯೇಯದೊಂದಿಗೆ ಪ್ರಾರಂಭವಾದ ಗೋವರ್ಧನ ಟ್ರಸ್ಟ್ ಈಗಾಗಲೇ ಗೋಸಂರಕ್ಷಣೆಯ ವಿಚಾರದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದ ಅವರು ನಗರಕ್ಕೆ ಹತ್ತಿರವಿರುವ ಜೂರು ಗೋಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವುದು, ಗೋವುಗಳಿಗೆ ಮೇವು ಒದಗಿಸುವುದು ಅಲ್ಲದೆ ಖಯಿಲೆಯಿಂದ ಬಳಲುತ್ತಿರುವ ಬಿಡಾಡಿ ಗೋವುಗಳಿಗಾಗಿ ಪಶು ವೈದ್ಯಕೀಯ ಅಂಬ್ಯೂಲೆನ್ಸ್ ವೈವಸ್ಥೆಯನ್ನು ಮಾಡಲಾಗಿದೆ ಎಂದರು.
ವಿಷಮುಕ್ತ ಆಹಾರ, ಸಾವಯವ ಕೃಷಿ, ದೇಸಿ ಹಸುಗಳ ಸಂರಕ್ಷಣೆ, ಸಾವಯವ ಗೊಬ್ಬರ ತಯಾರಿಕೆ, ತಾರಸಿ ತೋಟ, ಕೃಷಿ ಉತ್ಪನ್ನಗಳ ಮೌಲ್ಯ ವರ್ದನೆ ಇನ್ನಿತರ ಉದ್ಧೇಶಗಳೊಂದಿಗೆ ನೂತನವಾಗಿ ಸಾವಯವ ಕೃಷಿಕರ ಟ್ರಸ್ಟ್ನ್ನೂ ಅಂದೇ ಉದ್ಘಾಟಿಸಲಾಗುವುದು. ನಗರ

ಪ್ರದೇಶದ ಗೃಹಿಣಿಯರಿಗಾಗಿ ತಾರಸಿ ತೋಟ ಮಾಡುವ ಕುರಿತು ತರಬೇತಿ, ತರಕಾರಿ ಹಾಗೂ ಇನ್ನಿತರ ಬೆಳೆಗಳ ಬಿತ್ತನೆ ಬೀಜಗಳ ವಿತರಣೆ, ವಿಷಮುಕ್ತ ಆಹಾರ ಧಾನ್ಯಗಳನ್ನು, ತರಕಾರಿ ಬೆಳೆಗಳನ್ನು ಬೆಳೆಯಲು ರೈತರಿಗೆ ಉತ್ತ್ತೇಜನ ನೀಡುವುದರ ಮೂಲಕ ಪರಿಸರ ಸಂರಕ್ಷಣೆ, ಸಮಾಜದ ಸ್ವಾಸ್ತ್ಯ ಕಾಪಾಡುವ ನಿಟ್ಟಿನಲ್ಲಿ ಈ ಟ್ರಸ್ಟ್ ಕಾರ್ಯ ನಿರ್ವಹಿಸಲಿದೆ. ಟ್ರಸ್ಟಿನ ಅಧ್ಯಕ್ಷರಾಗಿ ಎಂ.ಎಂ.ಜಯಸ್ವಾಮಿ, ಉಪಾಧ್ಯಕ್ಷರಾಗಿ ದೇವೇಂದ್ರಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಡಾ.ಎಂ.ಎಸ್.ಪ್ರಶಾಂತ್, ಕಾರ್ಯದರ್ಶಿಯಾಗಿ ಸುರೇಶ್, ಖಜಾಂಚಿಗಳಾಗಿ ಓಂಪ್ರಕಾಶ್ ನಿಯುಕ್ತಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
೧೫ರಂದು ಬೆಳಿಗ್ಗೆ ಶ್ರೀಗಳನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಗುವುದು. ಗೋರಕ್ಷಣೆ ಕಾರ್ಯಕ್ಕೆ ಗೋವರ್ಧನ ಟ್ರಸ್ಟ್ ಗೆ ಚಟ್ನಳ್ಳಿ ರಮೇಶ್ ೬ ಎಕರೆ, ಭೂಪಾಳಂ ಶಿವಸ್ವಾಮಿ ೩ ಎಕರೆ, ಶರಣ್ಯ ಸಂಸ್ಥೆ ೨ ಎಕರೆ ಹಾಗೂ ಮಹೇಶ್ ಮೆಹ್ತಾ ೨ ಎಕರೆ ಜಮೀನು ನೀಡಿ ಸಹಕರಿಸಿದ್ದಾರೆ. ಅವರಿಗೆ ಟ್ರಸ್ಟ್ ಆಭಾರಿಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಇ. ಕಾಂತೇಶ್, ಎಸ್.ಕೆ.ಶೇಷಾಚಲ, ಉಮೇಶ್ ಆರಾಧ್ಯ, ಪೂರ್ಣಾನಂದ, ಶ್ರೀಪಾದ ಭಟ್, ರಾಕೇಶ್, ಶುಭಾ ರಾಘವೇಂದ್ರ, ಪುಷ್ಪಾವತಿ, ಪ್ರಮಥ, ಸುಮತೀಂದ್ರಾಚಾರ್ ಮೊದಲಾದವರಿದ್ದರು.
ಬಾಕ್ಸ್ಇಂದು ಚಿತ್ರದುರ್ಗದಲ್ಲಿ ನಡೆಯುವ ಬಿಎಸ್ವೈ ಅಭಿಮಾನೋತ್ಸವಕ್ಕೆ ಆಗಮಿಸುವಂತೆ ನಿನ್ನೆ ಸಂಸದ ಬಿ.ವೈ.ರಾಘವೇಂದ್ರ ಅವರು ನಮ್ಮ ಮನೆಗೆ ಬಂದು ಆಹ್ವಾನ ನೀಡಿದ್ದಾರೆ. ಆದರೆ ಎರಡು ತಿಂಗಳ ಹಿಂದೆಯೇ ಕುಟುಂಬ ಸಮೇತ ಪುರಿ ಜಗನ್ನಾಥಕ್ಕೆ ಹೋಗಲು ಪ್ರವಾಸ ನಿಗಧಿಪಡಿಸಿಕೊಂಡಿದ್ದರಿಂದ ಅಭಿಮಾನೋತ್ಸವಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಇದೊಂದು ಒಳ್ಳೆಯ ಕಾರ್ಯ ಯಶಸ್ವಿಯಾಗಲಿ. ನಾನು ಆ ಕಾರ್ಯಕ್ರಮದಲ್ಲಿ ಗೈರಾಗುವುದಕ್ಕೆ ಪ್ರಾಮುಖ್ಯತೆ ನೀಡಬೇಕಾಗಿಲ್ಲ. ಅದು ಅಷ್ಟೊಂದು ಗಮನಕೊಡುವ ವಿಷಯವೂ ಅಲ್ಲ ಎಂದು ಒಂದು ಕಾಲದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಒಡನಾಡಿ, ಸಮಕಾಲೀನ ಕೆ.ಎಸ್.ಈಶ್ವರಪ್ಪ ಮಾರ್ಮಿಕವಾಗಿ ನುಡಿದರು.