ಸಾಗರ : ಚುನಾಯಿತ ಸದಸ್ಯರು ಇಲ್ಲ ಎಂದು ಬೀಗಬೇಡಿ. ಬಡವರ ಕೆಲಸ ಮಾಡಿ ಕೊಡದಿದ್ದಲ್ಲಿ, ಪದೇಪದೇ ನಗರಸಭೆಗೆ ಜನರನ್ನು ಅಲೆಸಿದರೆ ನಿಮ್ಮ ವಿರುದ್ದ ಕ್ರಮ ಜರುಗಿಸುವುದು ಖಚಿತ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಎಚ್ಚರಿಕೆ ನೀಡಿದರು.
ಇಲ್ಲಿನ ನಗರಸಭೆಯಲ್ಲಿ ಶುಕ್ರವಾರ ನಗರಸಭೆ ವ್ಯಾಪ್ತಿಯ ವಿವಿಧ ಕಾಮಗಾರಿ ಸೇರಿದಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕಳೆದ ಎರಡೂವರೆ ವರ್ಷದಿಂದ ಈಸ್ವತ್ತು ಮಾಡಿಕೊಡದೆ ಸತಾಯಿಸುತ್ತಿದ್ದ ಕಂದಾಯ ನಿರೀಕ್ಷಕಿ ಮಮತಾ ಅವರನ್ನು ತರಾಟೆಗೆ ತೆಗೆದುಕೊಂಡು ಇನ್ನೊಮ್ಮೆ ಇಂತಹ ವಿಳಂಬನೀತಿ ಅನುಸರಿಸಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ನಗರದ ಮಾರ್ಕೇಟ್ ರಸ್ತೆ ಅಗಲೀಕರಣಕ್ಕೆ ಹಣ ಬಿಡುಗಡೆಯಾಗಿದೆ. ಆದರೆ ಕೆಲವರು ಜಾಗ ಬಿಡುತ್ತಿಲ್ಲ ಎನ್ನುವ ದೂರುಗಳಿವೆ. ಕಾನೂನು ಪ್ರಕಾರ ಅವರಿಗೆ ನೋಟಿಸ್ ನೀಡಿ, ಅದಕ್ಕೂ ಬಗ್ಗದೆ ಹೋದಲ್ಲಿ ದಂಡಂ ದಶ ಗುಣಂ ಎಂಬಂತೆ ಒಡೆದು ಹಾಕಿ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಳ್ಳಿ ಎಂದು ಸೂಚನೆ ನೀಡಿದ ಶಾಸಕರು, ಸಾಕಷ್ಟು ಬಾರಿ ರಸ್ತೆಗೆ ಜಾಗ ಕೊಡಿ ಎಂದು ಮನವಿ ಮಾಡಿದ್ದೇವೆ. ಇನ್ನು ಎಷ್ಟುದಿನ ಸಹಿಸಿಕೊಳ್ಳುವುದು. ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಕೊನೆಬಾರಿಗೆ ಸ್ಥಳೀಯ ನಿವಾಸಿಗಳ ಮನವೊಲಿಸಿ ಎಂದು ತಿಳಿಸಿದರು.

ಒಳಚರಂಡಿ ಕಾಮಗಾರಿಗೆ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ೭೦ ಕೋಟಿ ರೂ. ಮಂಜೂರು ಮಾಡಿಸಲಾಗಿತ್ತು. ಈತನಕ ಕಾಮಗಾರಿ ಮುಗಿದಿಲ್ಲ. ಈ ಬಾರಿ ಮತ್ತೆ ೩೫ ಕೋಟಿ ರೂ. ಹಣ ಮಂಜೂರು ಮಾಡಿಸಿದ್ದು ತಕ್ಷಣ ಅಪೂರ್ಣ ಕಾಮಗಾರಿ ಪೂರ್ಣಗೊಳಿಸಿ ಎಂದ ಅವರು, ಟ್ಯಾಗೂರ್ ಕಲ್ಚರಲ್ ಕಾಂಪ್ಲೆಕ್ಸ್ಗೆ ೪.೮೦ ಕೋಟಿ ರೂ. ಹಣ ಸಿದ್ದವಿದ್ದು ಶೀಘ್ರದಲ್ಲಿ ಕಲಾವಿದರು, ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಸಭೆ ಕರೆದು ರಂಗಮಂದಿರ ನಿರ್ಮಾಣ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದರು.

ನಗರವ್ಯಾಪ್ತಿಯಲ್ಲಿ ಆಶ್ರಯ ನಿವೇಶನಕ್ಕೆ ಸಂಬಂಧಪಟ್ಟಂತೆ ೨೦ ಎಕರೆ ಜಾಗ ಗುರುತಿಸಲಾಗಿದ್ದು, ಶೀಘ್ರ ಸರ್ಕಾರದಿಂದ ಮಂಜೂರಾತಿ ಪಡೆದು ನಿವೇಶನವಾಗಿ ಪರಿವರ್ತಿಸಿ ಫಲಾನುಭವಿಗಳಿಗೆ ಹಂಚಲಾಗುತ್ತದೆ. ಜನ್ನತ್ ನಗರದ ಇಕ್ಕೇರಿ ಅಘೋರೇಶ್ವರ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ೧೩೬ ಕುಟುಂಬಗಳು ಅನೇಕ ವರ್ಷಗಳಿಂದ ಮನೆ ಕಟ್ಟಿಕೊಂಡಿದ್ದು ಅವರಿಗೆ ಈಸ್ವತ್ತು ಸಿಗುತ್ತಿಲ್ಲ. ಇದರಿಂದ ಅವರು ಸರ್ಕಾರಿ ಸೌಲಭ್ಯ ಪಡೆಯಲು ಆಗುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ತಕ್ಷಣ ಜಾಗದ ಸರ್ವೇ ನಡೆಸಿ ವರದಿ ನೀಡಿ, ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಆ ಕುಟುಂಬಗಳಿಗೆ ನ್ಯಾಯ ದೊರಕಿಸಿ ಕೊಡುವ ಕೆಲಸ ಮಾಡಲಾಗುತ್ತದೆ. ಬಿಸಿಲು ಹೆಚ್ಚಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಇರುವ ವಾರ್ಡ್ಗಳಲ್ಲಿ ಟ್ಯಾಂಕರ್ ಮೂಲಕ ನೀರು ಕೊಡಿ. ೩೧ ವಾರ್ಡ್ಗಳಲ್ಲೂ ಸ್ವಚ್ಚತಾ ಲೋಪ ಆಗದಂತೆ ಗಮನ ಹರಿಸಿ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ನಗರಸಭೆ ಯೋಜನಾಧಿಕಾರಿ ರಂಗಸ್ವಾಮಿ, ಪೌರಾಯುಕ್ತ ಎಚ್.ಕೆ.ನಾಗಪ್ಪ, ತಹಶೀಲ್ದಾರ್ ಪ್ರದೀಪ್, ಶಾಸಕರ ಆಪ್ತ ಕಾರ್ಯದರ್ಶಿಗಳಾದ ಶ್ರೀನಿವಾಸ್, ರಮೇಶ್ ಟಿ.ಪಿ., ಮದನ್, ಬಾಲಚಂದ್ರ, ಸುರೇಶ್ ಬಾಬು, ಗಣಪತಿ ಮಂಡಗಳಲೆ, ಮಧುಮಾಲತಿ, ಮಕ್ಬೂಲ್ ಇನ್ನಿತರರು ಹಾಜರಿದ್ದರು. (