ಶಿವಮೊಗ್ಗ, ಏ.28: ಮಹಿಳೆಯೋರ್ವರ ಮಾಂಗಲ್ಯ ಸರ ಕಳವು ಮಾಡಿದ್ದ ಆರೋಪದ ಮೇರೆಗೆ, ಇಬ್ಬರು ಯುವಕರನ್ನು ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮನೋಜ್ ಶಿರಮಣ ಹಾಗೂ ವಿಜಯ್ ಕುಮಾರ್ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಇವರಿಂದ ಕೃತ್ಯಕ್ಕೆ ಬಳಸಿದ್ದ ಸ್ಪ್ಲೆಂಡರ್ ಬೈಕ್ ಹಾಗೂ 2.50 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಡಿವೈಎಸ್ಪಿ ಸಂಜೀವ್ ಕುಮಾರ್ ಟಿ ಅವರ ಮಾರ್ಗದರ್ಶನದಲ್ಲಿ ಇನ್ಸ್’ಪೆಕ್ಟರ್ ರಾಘವೇಂದ್ರ ಖಾಂಡಿಕೆ, ಸಿಬ್ಬಂದಿಗಳಾದ ಎಎಸ್ಐ ವಿಜಯ, ಸಿಹೆಚ್’ಸಿ ಕಲ್ಲನಗೌಡ, ಕುಮಾರ್ ಬಣಕಾರ್, ದಾಕ್ಷಾಯಿಣಿ, ರಾಘವೇಂದ್ರ, ಸಿಪಿಸಿಗಳಾದ ಶ್ರೀಕಾಂತ್, ಕಾಶೀನಾಥ್ ರವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಮಹಿಳಾ ಸಂಘದ ಸಭೆಯೊಂದರಲ್ಲಿ ಭಾಗವಹಿಸಲು ಶಿವಮೊಗ್ಗ ನಗರದ ಮಹಿಳೆಯೋರ್ವರು, ಕಳೆದ 25 ರಂದು ಹೊಳಲೂರಿಗೆ ಆಗಮಿಸಿದ್ದರು. ಸರ್ಕಾರಿ ಆಸ್ಪತ್ರೆ ಬಳಿ ನಡೆದುಕೊಂಡು ಹೋಗುವಾಗ, ಬೈಕ್ ನಲ್ಲಿ ಆಗಮಿಸಿದ ಆರೋಪಿಗಳು 35 ಗ್ರಾಂ ತೂಕದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.