ಶಿವಮೊಗ್ಗ ಏ.23ರಾಜ ಮನೆತನದ ಭಗೀರಥರು ತಮ್ಮ ಅಚಲ ಪ್ರಯತ್ನ ಮತ್ತು ತಪಸ್ಸಿನಿಂದಾಗಿ ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದ್ದರಿಂದಲೇ ಇಂದಿಗೂ ನಾವು ‘ಭಗೀರಥ ಪ್ರಯತ್ನ’ ಮಾಡಬೇಕೆಂದು ಹೇಳುತ್ತೇವೆ ಎಂದು ಶಾಸಕರಾದ ಎಸ್ ಎನ್ ಚನ್ನಬಸಪ್ಪ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಪ್ಪಾರ ಸಮಾಜ ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ನಗರದ ಕುವೆಂಪು ರಂಗಮAದಿರದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಒಬ್ಬ ವ್ಯಕ್ತಿ ಎಷ್ಟೇ ಅಡೆತಡೆಗಳು ಬಂದರೂ ಗುರಿ ಮುಟ್ಟುವವರೆಗೆ ವಿರಮಿಸದಿದ್ದರೆ, ಅಂತಹ ಪ್ರಯತ್ನವನ್ನು ಇಂದಿಗೂ ನಾವು ‘ಭಗೀರಥ ಪ್ರಯತ್ನ’ ಎಂದು ಕರೆಯುತ್ತೇವೆ.

ತಮ್ಮ ಪೂರ್ವಜರಿಗೆ ಸದ್ಗತಿ ನೀಡುವುದಕ್ಕಾಗಿ ತಮ್ಮ ಅಚಲ ತಪಸ್ಸಿನಿಂದ ಗಂಗೆ ಮತ್ತು ಶಿವ ಇಬ್ಬರನ್ನೂ ಭಗೀರಥರು ಒಲಿಸಿಕೊಳ್ಳುತ್ತಾರೆ. ಹಾಗೂ ಗಂಗೆಯನ್ನು ಈ ಭೂಮಿಯ ಮೇಲೆ ನಿರಂತರವಾಗಿ ಹರಿಸುವ ಮೂಲಕ ಅವರು ಪಿತೃಗಳಿಗೆ ಸದ್ಗತಿ ಕೊಡಿಸುವುದಲ್ಲದೇ, ಭೂಮಿಯನ್ನು ಹಸಿರಾಗಿಸಿದ್ದಾರೆ ಎಂದ ಅವರು ನದಿಯಾಗಿ ಹರಿಯುತ್ತಿರುವ ಗಂಗೆ ನಮ್ಮನ್ನೆಲ್ಲ ಪರಿಶುದ್ದವಾಗಿಸುತ್ತಿದ್ದಾಳೆ ಎಂದರು.
ನಮ್ಮೆಲ್ಲರಲ್ಲಿ ಶಕ್ತಿ ಇದೆ. ಶಕ್ತಿಯ ಪರಿಚಯವಾಗುವುದು ಈ ರೀತಿಯ ಸವಾಲುಗಳನ್ನು ಸ್ವೀಕರಿದಾಗ ಮಾತ್ರ. ಯಾವುದೇ ಕೆಲಸಕ್ಕೆ ಪ್ರಾಮಾಣಿಕ ಪ್ರಯತ್ನ ಅಗತ್ಯವಿದೆ. ಭಗೀರಥರು ಇಡೀ ಮನುಕುಲಕ್ಕೆ ಶಕ್ತಿ ಕೊಡುವ ಕೆಲಸ ಮಾಡಿದ್ದು, ಇವರು ಶಕ್ತಿಯ ಸಂಕೇತವಾಗಿದ್ದಾರೆ ಎಂದರು.
ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶಾರದಾ ಪೂರ್ಯಾನಾಯ್ಕ ಮಾತನಾಡಿ, ಉಪ್ಪಿಗಿಂತ ರುಚಿ ಬೇರೆ ಇಲ್ಲ. ಇಂತಹ ಉಪ್ಪನ್ನು ಸಮಾಜಕ್ಕೆ ನೀಡಿದ ಸಮಾಜ ಶ್ರೇಷ್ಠ ಕೆಲಸ ಮಾಡುತ್ತಿದೆ. ಭಗೀರಥ ಪ್ರಯತ್ನದ ಪರಿಕಲ್ಪನೆ ನೀಡಿದ ಭಗೀರಥರು ನಮಗೆಲ್ಲ ನಿಜವಾದ ಪ್ರೇರಣೆಯಾಗಿದ್ದಾರೆ ಎಂದು ಸ್ಮರಿಸಿದರು.

ಬಾಗಲಕೋಟೆ ಜಿಲ್ಲೆಯ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರರಾದ ನಾಗರಾಜ್ ಶಿರೇಳ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಭಗೀರಥನ ಮುತ್ತಜ್ಜನಾದ ಸಗರ ರಾಜನ 60 ಸಾವಿರ ಪುತ್ರರು ಕಪಿಲ ಮಹರ್ಷಿಗಳ ಶಾಪದಿಂದ ಭಸ್ಮವಾಗಿರುತ್ತಾರೆ. ಅವರ ಆತ್ಮಕ್ಕೆ ಮುಕ್ತಿ ಸಿಗಬೇಕಾದರೆ ಸ್ವರ್ಗದಲ್ಲಿರುವ ಗಂಗೆ ಭೂಮಿಗೆ ಬರಬೇಕಿತ್ತು. ಇದು ಅಕ್ಷರಶಃ ಅಸಾಧ್ಯವಾದ ಕೆಲಸವಾಗಿತ್ತು. ಆದರೆ ಭಗೀರಥನು ತನ್ನ ರಾಜ್ಯದ ಸುಖ-ಭೋಗಗಳನ್ನು ತ್ಯಜಿಸಿ, ಸಾವಿರಾರು ವರ್ಷಗಳ ಕಾಲ ಪಂಚಾಗ್ನಿ ಕಠಿಣ ತಪಸ್ಸು ಮಾಡುತ್ತಾರೆ.
ಭಗೀರಥನ ಭಕ್ತಿಗೆ ಮೆಚ್ಚಿದ ಗಂಗೆ ಭೂಮಿಗೆ ಬರಲು ಒಪ್ಪಿದಾಗ, ಆಕೆಯ ವೇಗವನ್ನು ತಡೆಯಲು ಶಿವನ ಮೊರೆ ಹೋಗಿ, ಗಂಗೆಯನ್ನು ಭೂಮಿಗೆ ತಂದು ತನ್ನ ಪೂರ್ವಜರಿಗೆ ಮುಕ್ತಿ ನೀಡುತ್ತಾರೆ. ಈ ರೀತಿಯ ಭಗೀರಥ ಪ್ರಯತ್ನ ಇಲ್ಲದೇ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಾವಿಂದು ಈ ಪ್ರಯತ್ನದ ಹಾದಿ ಹಿಡಿಯಬೇಕು ಎಂದರು.
ಉಪ್ಪಾರ ಸಮಾಜದ ನಾವು ಮೊದಲು ಕ್ಷತ್ರಿಯರಾಗಿದ್ದೆವು. ಆನಂತರ ವ್ಯಾಪಾರ ಮಾಡುವ ವೈಶ್ಯರಾಗಿದ್ದೆವು. ಆದರೆ ಈಗ ನಾವು ಪಾತಾಳ ಲೋಕದಲ್ಲಿರುವ ಸ್ಥಿತಿಯಲ್ಲಿ ಇದ್ದೇವೆ. ನಾವು ಮುಂದೆ ಬರಬೇಕೆಂದರೆ ಮೊದಲು ನಾವು ದಂಡ ನಾಯಕರಾಗಬೇಕು. ನಂತರ ನಾಯಕರಾಗಬೇಕು. ನಮಗೆ ವ್ಯವಸ್ಥಿತವಾದ ಶಿಕ್ಷಣ ಅತಿ ಅವಶ್ಯಕವಾಗಿದೆ. ಇದರೊಟ್ಟಿಗೆ ಸಂಘಟಿತರಾಗಬೇಕಿದ್ದು ಭಗೀರಥರಂತಹ ನಾಯಕನನ್ನು ಸೃಷ್ಟಿ ಮಾಡಬೇಕಿದೆ ಎಂದರು.
ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಚೇತನ್ ಕೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ಎಸ್ ಟಿ ಹಾಲಪ್ಪ, ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ ಕೆ, ಖಜಾಂಚಿ ನಾಗರಾಜ ಕಂಕಾರಿ, ಮಾಜಿ ಸೂಡಾ ಅಧ್ಯಕ್ಷರಾದ ಜ್ಞಾನೇಶ್, ಉಪಾಧ್ಯಕ್ಷರಾದ ಎಂ.ಸಿ.ಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉಮೇಶ್ ಹೆಚ್, ಶಿರಸ್ತೇದಾರ್ ಸುರೇಶ್, ಸಮಾಜದ ಮುಖಂಡರು ಹಾಜರಿದ್ದರು.