ಶಿವಮೊಗ್ಗ: ಟ್ರಾಫಿಕ್ ಸಮಸ್ಯೆ ಸರಿಪಡಿಸುವಂತೆ ಹಾಗೂ ಸೈಬರ್ ಅಪರಾಧಗಳ ನಿಯಂತ್ರಣ ಸಂಬಂಧಿಸಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಅವರೊಂದಿಗೆ ಸಮಾಲೋಚನೆ ನಡೆಸಿದರು.
ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಪ್ರಮುಖ ಸಮಸ್ಯೆ, ಟ್ರಾಫಿಕ್ ಸಮಸ್ಯೆ, ಡಿಜಿಟಲ್ ಅರೆಸ್ಟ್, ಸೈಬರ್ ಅಪರಾಧ, ಸಾರ್ವಜನಿಕ ಸುರಕ್ಷತೆ, ಮಾದಕ ದ್ರವ್ಯ ಸಂಬಂಧಿತ ಅಪರಾಧ, ಕಾನೂನುಬಾಹಿರ ಚಟುವಟಿಕೆ, ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಆದ್ಯತೆ ಮೇರೆಗೆ ಮಾಡುವುದು ಇನ್ನೂ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಶಿವಮೊಗ್ಗ ನಗರದ ಸಾಗರ ರಸ್ತೆ, ಆಟೋ ಕಾಂಪ್ಲೆಕ್ಸ್ ಹಾಗೂ ಕಲ್ಲೂರು ಮಂಡ್ಲಿ ಕೈಗಾರಿಕಾ ಪ್ರದೇಶಗಳಲ್ಲಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ರಾಷ್ಟ್ರೀಯ ಹೆದ್ದಾರಿ ಯೋಜನೆಯ ಭಾಗವಾಗಿರುವ ಶಿವಮೊಗ್ಗ-ಮಾಚೇನಹಳ್ಳಿ ರಸ್ತೆಯ ನಿರ್ಮಾಣ ಸಮಸ್ಯೆಗಳು ಇದ್ದು, ಸಂಚಾರ ದಟ್ಟಣೆ ಮತ್ತು ಸುರಕ್ಷತಾ ಅಪಾಯಗಳನ್ನು ಉಂಟುಮಾಡಿದೆ. ಸಂಚಾರ ಸಮಸ್ಯೆ ಸರಿಪಡಿಸಲು ಪೊಲೀಸ್ ಇಲಾಖೆ, ಎನ್ಎಚ್ಎಐ ಸಮನ್ವಯದ ಅಗತ್ಯವಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಮಾತನಾಡಿ, ಜಿಲ್ಲೆಗಳಿಗೆ ಕೈಗಾರಿಕೆಗಳಿಗೆ ಬಂಡವಾಳ ಹರಿದು ಬರಲು ಕಾನೂನು ಮತ್ತು ಸುವ್ಯವಸ್ಥೆ ಬಲಪಡಿಸುವುದು ತುಂಬಾ ಮುಖ್ಯ. ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳನ್ನು ತಡೆಗಟ್ಟುವುದು, ಟ್ರಾಫಿಕ್ ಸಮಸ್ಯೆ, ಗಾಂಜಾ ತಡೆಗಟ್ಟುವುದು ಪ್ರಮುಖ ಆದ್ಯತೆ ಆಗಿವೆ. ಶಿವಮೊಗ್ಗವನ್ನು ಸೂಕ್ಷö್ಮ ಪ್ರದೇಶ ಎಂದು ಗುರುತಿಸಲಾಗಿದೆ. ಕೈಗಾರಿಕಾ ವಸಾಹತು ಪ್ರದೇಶಗಳಲ್ಲಿನ ಟ್ರಾಫಿಕ್ ಸಮಸ್ಯೆಗಳ ಸರಿಪಡಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ್, ನಿರ್ದೇಶಕರಾದ ಪ್ರದೀಪ್ ವಿ.ಯಲಿ, ಗಣೇಶ್ ಅಂಗಡಿ, ಕೆ.ಬಿ.ಶಿವಕುಮಾರ್, ಜಿ.ಕಿರಣ್ ಕುಮಾರ್ ಜಿ.ವಿಜಯಕುಮಾರ್, ಇತರರಿದ್ದರು.