ಶಿವಮೊಗ್ಗ : ಸಂಸತ್ತಿನಲ್ಲಿ ಶುಕ್ರವಾರ ಮಂಡನೆಯಾದ ನಾರಿಶಕ್ತಿ ವಂದನಾ ಅಧಿನಿಯಮದ ವಿರುದ್ಧ ಇಂಡಿ (ಐಎನ್ಡಿಐಎ) ಒಕ್ಕೂಟ ಮತ ಚಲಾಯಿಸಿದ್ದು, ಇದು ಭಾರತದಲ್ಲಿರುವ ಪ್ರತಿ ಮಹಿಳೆಗೆ ಮಾಡಿದ ಅಪಮಾನ. ಮುಂದಿನ ದಿನಗಳಲ್ಲಿ ಎನ್ಡಿಎ ಸರ್ಕಾರವೇ ಈ ಮಹಿಳಾ ಮಸೂದೆಯನ್ನು ಜಾರಿಗೊಳಿಸುವುದು ಶತಃ ಸಿದ್ಧ ಎಂದು ಬಿಜೆಪಿ ಶಪಥ ಮಾಡಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಿಳೆಯರಿಗೆ ರಾಜಕೀಯ ಶಕ್ತಿ ನೀಡಬೇಕು. ಈ ಮೂಲಕ ದೇಶವನ್ನು ಸುಭದ್ರವಾಗಿ ಕಟ್ಟಬೇಕು ಎಂಬುದು ನರೇಂದ್ರಮೋದಿ ನೇತೃತ್ವದ ಸರ್ಕಾರದ ಆಶಯವಾಗಿತ್ತು. ಆದರೆ ಕಾಂಗ್ರೆಸ್ ಈ ಮಸೂದೆಗೆ ಬೆಂಬಲ ನೀಡದೆ ಅಗೌರವ ತೋರಿಸಿದ್ದು ಕಾಂಗ್ರೆಸ್ ತನ್ನಷ್ಟಕ್ಕೆ ತಾನೇ ಬೆತ್ತಲೆಯಾಗಿದೆ. ಕಾಂಗ್ರೆಸ್ಗೆ ಮಹಿಳೆಯರ ಶಾಪ ತಟ್ಟದೇ ಬಿಡುವುದಿಲ್ಲ ಎಂದ ಅವರು, ಸಂವಿಧಾನಕ್ಕೆ ಚ್ಯುತಿ ಬರದಂತೆ ಈ ಮಸೂದೆ ಮಂಡನೆಯಾಗಿದ್ದು, ಇದಕ್ಕೆ ಕಾಂಗ್ರೆಸ್ ದ್ರೋಹ ಬಗೆದಿದೆ ಎಂದು ಟೀಕಾಪ್ರಹಾರ ಮಾಡಿದರು.
ಲಿಂಗಾಧಾರಿತವಾಗಿ ಮೀಸಲಾತಿ ನಿಗಧಿಪಡಿಸಬಹುದೇ ಹೊರತು, ಧರ್ಮಾಧಾರಿತವಾಗಿ ಮೀಸಲಾತಿ ನೀಡಲೇಬಾರದು ಎಂದರು.

ಡಾ.ಬಿ.ಆರ್.ಅಂಬೇಡ್ಕರ್ರವರೇ ಸ್ಪಷ್ಟಪಡಿಸಿದ್ದಾರೆ. ಆದರೆ ಧರ್ಮದ ಆಧಾರದಲ್ಲಿ ದೇಶ ವಿಭಜನೆ ಮಾಡಿದ ಕಾಂಗ್ರೆಸ್ ಮುಸಲ್ಮಾನ್ ಮಹಿಳೆಯರಿಗೆ ಮಸೂದೆಯಲ್ಲಿ ಪ್ರತ್ಯೇಕ ಮೀಸಲಾತಿ ಉಲ್ಲೇಖಿಸಿಲ್ಲ ಎಂದು ಅಸಹಕಾರ ತೋರಿ ವಿರೋಧಿಸಿರುವುದು ಕಾಂಗ್ರೆಸ್ನ ಸ್ವಭಾವ. ಇಲ್ಲಿಯವರೆಗೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಸಿಎಎ, ತ್ರಿವಳಿ ತಲಾಕ್ ರದ್ಧತಿ, ಜಮ್ಮು-ಕಾಶ್ಮೀರದ ೩೭೦ನೇ ವಿಧಿ ರದ್ಧತಿ, ವಕ್ಫ್ ತಿದ್ದುಪಡಿ ಕಾಯ್ದೆ, ಮೂರು ಹೊಸ ಕ್ರಿಮಿನಲ್ ಕಾಯ್ದೆ ಸೇರಿದಂತೆ ಈಗ ನಾರಿವಂದನಾ ವಿಧೇಯಕ ಮಂಡಿಸಿದ್ದು ಇವೆಲ್ಲವನ್ನು ಕಾಂಗ್ರೆಸ್ ವಿರೋಧಿಸುತ್ತಲೇ ಬಂದಿದೆ. ಸುಳ್ಳುಸುದ್ಧಿ ಹರಡುವ ಮೂಲಕ ದೇಶದ ಮಹಿಳೆಯರಿಗೆ, ಸಂವಿಧಾನಕ್ಕೆ ಚ್ಯುತಿ ತರುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಇದೊಂದು ಇಂಡಿ ಒಕ್ಕೂಟದ ಕುಕೃತ್ಯ ಎಂದು ಅವರು ಕಿಡಿಕಾರಿದರು.
ನಾರಿಶಕ್ತಿ ವಂದನಾ ವಿಧೇಯಕವನ್ನು ಸೋಲಿಸುವುದರ ಮೂಲಕ ಪ್ರತಿಪಕ್ಷದವರು ಯುದ್ಧ ಗೆದ್ದಿದ್ದೇವೆ ಎಂಬ ಸಂಭ್ರಮದಲ್ಲಿರುವ ಕಾಂಗ್ರೆಸ್ಗೆ ಜನರೇ ತಕ್ಕಪಾಠ ಕಲಿಸುತ್ತಾರೆ. ಈ ಹಿಂದೆ ನೆಹರೂ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿದ್ದ ಶ್ರೀಮತಿ ರೇಣುಕಾ ರೇ, ಸರೋಜನಿ ನಾಯ್ಡು ಮೊದಲಾದವರೇ ಮಹಿಳಾ ಮಸೂದೆ ಜಾರಿಗೆ ದಶಕಗಳ ಹೋರಾಟ ನಡೆಸಿದ್ದರು. ಬಳಿಕ ೧೯೭೪ರಲ್ಲಿ ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿಗೆ ಸಂಬಂಧಿಸಿದಂತೆ ಸಮಿತಿಯೊಂದನ್ನು ರಚಿಸಿ ವರದಿಯೊಂದನ್ನು ತರಿಸಿಕೊಂಡು ಸ್ಥಳೀಯ ಚುನಾವಣೆಗಳಲ್ಲಿ ಮಹಿಳೆಯರಿಗೆ ಪ್ರಾತ್ಯನಿಧ್ಯ ಕೊಡುವಲ್ಲಿಯೂ ಕಾಂಗ್ರೆಸ್ ವಿಫಲವಾಗಿದೆ.
೧೯೯೩ರಲ್ಲಿ ೧೯೭೪ರ ಕಾಯ್ದೆಗೆ ತಿದ್ದುಪಡಿ ನಿರ್ಣಯ ತರಲಾಗಿತ್ತು. ಆಗಲೂ ಮಹಿಳಾ ಮೀಸಲು ಮಸೂದೆ ಜಾರಿಗೊಳಿಸಲು ಕಾಂಗ್ರೆಸ್ ಪ್ರಯತ್ನಿಸಲಿಲ್ಲ. ತದನಂತರ ಪ್ರಧಾನಿ ಹೆಚ್.ಡಿ.ದೇವೇಗೌಡ ಸರ್ಕಾರದಲ್ಲಿ ಇದಕ್ಕೆ ಪ್ರಯತ್ನ ನಡೆದಿತ್ತು. ಆಗಲೂ ಕಾಂಗ್ರೆಸ್ ಬೆಂಬಲ ನೀಡಿಲ್ಲ. ೧೯೯೯-೨೦೦೪ರ ಎನ್ಡಿಎ ಸರ್ಕಾರದ ಅವಧಿಯಲ್ಲಿ ನಾಲ್ಕು ಭಾರೀ ಮಹಿಳಾ ಮಸೂದೆ ಮಂಡನೆಯಾದರೂ ಕಾಂಗ್ರೆಸ್ ಅದನ್ನು ವಿರೋಧಿಸುತ್ತಲೇ ಬಂದಿದೆ. ೨೦೦೪-೨೦೧೪ರ ಯುಪಿಎ ಸರ್ಕಾರದ ಅವಧಿಯಲ್ಲಿಯೂ ಮಹಿಳೆಯರಿಗೆ ಮೀಸಲು ನೀಡುವ ಯೋಚನೆಯನ್ನೇ ಮಾಡಲಿಲ್ಲ. ೨೦೧೪-೨೦೧೯ರ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಮಹಿಳಾ ಮೀಸಲಿಗೆ ವಾಗ್ಧಾನ ಮಾಡಿತ್ತು. ಕೊಟ್ಟ ಮಾತಿನಂತೆ ನಡೆದುಕೊಂಡ ಎನ್ಡಿಎ ಸರ್ಕಾರ ೨೦೨೧ರಲ್ಲಿ ಸುಪ್ರೀಂಕೋರ್ಟ್ ನೀಡಿದ ನಿರ್ದೇಶನದ ಅನ್ವಯ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿ ಅಂಗೀಕಾರ ಪಡೆದಿತ್ತು. ಈಗ ಮತ್ತೆ ಮಂಡನೆಯಾದ ನಾರಿಶಕ್ತಿ ವಂದನಾ ಅಧಿನಿಯಮ -ಮಹಿಳಾ ಮಸೂದೆಗೆ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಬೆಂಬಲಿಸದೆ ಅಸಹಕಾರ ತೋರಿಸುವುದರ ಮೂಲಕ ನ್ಯಾಯಾಲಯ ನಿಂದನೆಯನ್ನೂ ಮಾಡಿದೆ ಎಂದು ಹರಿಹಾಯ್ದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ನಗರಾಧ್ಯಕ್ಷ ಮೋಹನ್ ರೆಡ್ಡಿ, ಪ್ರಮುಖರಾದ ಹರಿಕೃಷ್ಣ, ಶಿವರಾಜ್, ಎಂ.ಜೆ. ನಾಗರಾಜ್, ರಶ್ಮೀ ಶ್ರೀನಿವಾಸ್, ಮಂಜುನಾಥ್, ದೀನ್ದಯಾಳ್, ಸುರೇಖಾ ಮುರಳೀಧರ್, ನಿರ್ಮಲಾ ಪ್ರಕಾಶ್ ಮೊದಲಾದವರಿದ್ದರು.