ಶಿವಮೊಗ್ಗ : ನಗರದಲ್ಲಿ ಉದ್ಭವವಾಗಿರುವ ಕಲುಷಿತ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಇನ್ನೊಂದು ವಾರದಲ್ಲಿ ಇತ್ಯರ್ಥ ಕಂಡುಕೊಳ್ಳಲಾಗುವುದು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.

ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ನಗರದಲ್ಲಿ ಇತ್ತೀಚಿನ ಮಳೆಯಿಂದಾಗಿ ಕಲುಷಿತ ನೀರು ಸರಬರಾಜಾಗುತ್ತಿರುವ ಬಗ್ಗೆ ಸಾರ್ವಜನಿಕರಿಗೆ ದೂರು ಕೇಳಿಬರುತ್ತಿದೆ. ಈ ಕುರಿತು ಈಗಾಗಲೇ ಜಲಮಂಡಳಿಯವರ ಜೊತೆ ಚರ್ಚಿಸಲಾಗಿದೆ. ಎರಡನೇ ಹಂತದ ನೀರು ಸರಬರಾಜಿಗೆ ಜಲಸಂಗ್ರಹಗಾರಕ್ಕೆ ಭೂಮಿಯನ್ನು ಗುರುತಿಸಲಾಗಿದೆ. ಶೆಟ್ಟಿಹಳ್ಳಿ ಅಭಯಾರಣ್ಯದ ಕಂದಾಯ ಜಾಗವನ್ನು ಗುರುತಿಸಲಾಗಿದೆ. ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಸೆಲ್ವಮಣಿ ಅವರ ಜೊತೆ ಚರ್ಚಿಸಲಾಗಿದ್ದು, ಈ ಕುರಿತು ಪ್ರಸ್ತಾವನೆಯನ್ನು ಕಳುಹಿಸಿ ಕೊಡುವಂತೆ ಕೋರಿದ್ದಾರೆ. ಶಿವಮೊಗ್ಗ ನಗರಕ್ಕೆ ಎರಡು ಟಿಎಂಸಿ ನೀರು ಬೇಕಾಗಿದ್ದು, ಈ ಕುರಿತು ನೀರಾವರಿ ಇಲಾಖೆ ಅನುಮತಿ ಪಡೆಯಲಾಗಿದೆ. ಅಭಿವೃದ್ಧಿ ಹೊಂದಿದ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕುಡಿಯುವ ನೀರಿನ ಸಮಸ್ಯೆಯನ್ನು

ಬಗೆಹರಿಸಲಾಗುವುದು. ಹಾಲಿ ಇರುವ ನೀರು ಸಂಸ್ಕರಣಾ ಕೇಂದ್ರದಲ್ಲಿ ಫಿಲ್ಟರ್ ಬೆಡ್ಗಳು ಹಾಳಾಗಿದ್ದು ಟೆಂಡರ್ ಕರೆಯಲಾಗಿದೆ ಎಂದರು.
ಪ್ರಧಾನಿ ನರೇಂದ್ರಮೋದಿಯವರ ಐತಿಹಾಸಿಕ ಯೋಜನೆಯಾದ ನಾರೀಶಕ್ತಿ ವಂದನಾ ಅಧಿನಿಯಮದ ಬಗ್ಗೆ ಪ್ರಧಾನಿಯವರನ್ನು ತಾವು
ಅಭಿನಂದಿಸುವುದಾಗಿ ತಿಳಿಸಿದ ಅವರು, ಅಧಿನಿಯಮದ ಕುರಿತಾಗಿಯೇ ಪ್ರಧಾನಿಯವರು ಮೂರು ದಿನಗಳ ಸಂಸತ್ ವಿಶೇಷ ಅಧಿವೇಶನವನ್ನು ಕರೆದಿದ್ದಾರೆ. ಪ್ರಧಾನಿ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಲು ನಾಳೆ ಏ.೧೮ರಂದು ಎಲ್ಲಾ ಮಹಿಳೆಯರೂ ಸೇರಿ ಕೃತಜ್ಞತಾ ಸಮರ್ಪಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲಿ ಪ್ರಧಾನಿಯವರಿಗೆ ಇಡೀ ದೇಶದ ಜನತೆಯ ಪರವಾಗಿ ಅಭಿನಂದನೆ, ಕೃತಜ್ಞತೆ ಸಲ್ಲಿಸಲಾಗುವುದು ಎಂದರು.