ಶಿವಮೊಗ್ಗ : ನಗರದಲ್ಲಿ ಕಲುಷಿತ ನೀರು ಸರಬರಾಜು ಆಗುತ್ತಿರುವುದನ್ನು ವಿರೋಧಿಸಿ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಳೆದ ಹಲವು ದಿನಗಳಿಂದ ನಗರದಲ್ಲಿ ಕುಡಿಯುವ ನೀರು ಕಲುಷಿತವಾಗಿದ್ದು, ನಾಗರೀಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕಲುಷಿತ ನೀರು ಮನೆಗಳ ಟ್ಯಾಂಕ್ಗಳು ತುಂಬಿ ಅದನ್ನು ಸ್ವಚ್ಛ ಮಾಡಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಕಲುಷಿತ ನೀರಿನಿಂದಾಗಿ ಹಲವು ಬಾರಿ ಟ್ಯಾಂಕ್ ಸ್ವಚ್ಛತೆಗಾಗಿ ಹತ್ತಾರು ಸಾವಿರ ರೂ.ಗಳನ್ನು ಖರ್ಚು ಮಾಡಬೇಕಾಗಿರುವುದು ಸಾರ್ವಜನಿಕರಿಗೆ ಅನಿವಾರ್ಯವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.


ನೀರು ಸರಬರಾಜು ಮಂಡಳಿಯವರು ಮಳೆ ಜಾಸ್ತಿಯಾಗಿದೆ. ಕಲುಷಿತ ನೀರು ಬಂದಿದೆ ಎಂದು ಹಾರಿಕೆಯ ಉತ್ತರ ಕೊಡುತ್ತಿದ್ದಾರೆ. ಆದರೆ ಕಲುಷಿತ ನೀರನ್ನು ಶುದ್ಧೀಕರಣ ಮಾಡುವುದು ಕೂಡಾ ಅವರ ಹೊಣೆಯಾಗಿದೆ. ನೀರು ಶುದ್ಧಿಕರಣ ಘಟಕದಲ್ಲಿ ಮಳೆಗಾಲಕ್ಕೆ ಮುಂಚಿತವಾಗಿ ಮುನ್ನೆಚ್ಚರಿಕೆ ಕ್ರಮವನ್ನು ಪಾಲಿಸದೇ ಇರುವುದು ಯಂತ್ರಗಳ ನಿರ್ವಹಣಾ ಕಾರ್ಯ ಸರಿಯಾಗಿ ಆಗದೇ ಇರುವುದು ಈ ತೊಂದರೆಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಶುದ್ಧೀಕರಣ ಘಟಕಗಳಲ್ಲಿ ಮಣ್ಣಿನ ಸಂಗ್ರಹ ಆಗಿರುತ್ತದೆ. ಇದನ್ನು ಮುಂಚಿತವಾಗಿಯೇ ಇಡೀ ಘಟಕವನ್ನು ಸ್ಥಗಿತಗೊಳಿಸಿ ಶಿಲ್ಟ್ ತೆಗೆಯುವ ಕಾರ್ಯ ಆಗಬೇಕು. ಆದರೆ ಅಲ್ಲಿ ಯಂತ್ರಗಳೇ ಸರಿಯಾಗಿ ಕೆಲಸವನ್ನು ನಿರ್ವಹಿಸುತ್ತಿಲ್ಲ ಎಂದು ದೂರಿದರು.
ನಗರದಲ್ಲಿ ಈಗಾಗಲೇ ನಾಲ್ಕು ಲಕ್ಷ ಜನಸಂಖ್ಯೆ ದಾಟಿದ್ದು, ನೀರು ಸರಬರಾಜು ಇನ್ನೂ ಜಾಸ್ತಿ ಪ್ರಮಾಣದಲ್ಲಿ ಆಗಬೇಕಾಗುತ್ತದೆ. ಅದಕ್ಕೆ ತಕ್ಕಂತೆ ನೀರು ಶುದ್ಧೀಕರಣ ಘಟಕವನ್ನು ಮೇಲ್ದರ್ಜೆಗೆ ಏರಿಸಬೇಕು. ನೀರು ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸಬೇಕು. ಪರಿಣಿತ ಸಿಬ್ಬಂದಿಗಳನ್ನು ಇದಕ್ಕಾಗಿ ನೇಮಿಸಬೇಕು. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಶಿವಮೊಗ್ಗಕ್ಕೆ ನೀರು ಶುದ್ಧೀಕರಣ ಘಟಕವನ್ನು ಸ್ಥಾಪಿಸಬೇಕು. ಇಲ್ಲದಿದ್ದರೆ ನಮ್ಮ ಒಕ್ಕೂಟದಿಂದ ಹೋರಾಟವನ್ನು ತೀವ್ರವಾಗಿ ಹಮ್ಮಿಕೊಳ್ಳಲಾಗುತ್ತದೆ. ಕೂಡಲೇ ಕಲುಷಿತ ನೀರು ಸರಬರಾಜನ್ನು ನಿಲ್ಲಿಸಿ ಶಾಶ್ವತ ಪರಿಹಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ಪ್ರತಿಭಟನೆಯಲ್ಲಿ ಒಕ್ಕೂಟದ ಪ್ರಮುಖರಾದ ಕೆ.ವಿ.ವಸಂತ್ಕುಮಾರ್, ಡಾ.ಎ.ಸತೀಶ್ಕುಮಾರ್ ಶೆಟ್ಟಿ, ಎಸ್.ಬಿ.ಅಶೋಕ್ಕುಮಾರ್, ಡಾ.ಕೆ.ಆರ್.ಶ್ರೀಧರ್, ಬಿ.ಗೋಪಿನಾಥ್, ಸೀತಾರಾಮ್, ವಿನೋದ್ ಪೈ, ಶಂಕರಪ್ಪ, ಡಾ. ಶೇಖರ್ ಗೌಳೇರ್, ವಾಸುದೇವ ಸೇರಿದಂತೆ ಹಲವರಿದ್ದರು.