ಶಿವಮೊಗ್ಗ : ನಗರದಲ್ಲಿ ಜಾರಿಯಾದ ಬಹುಕೋಟಿ ಸ್ಮಾರ್ಟ್ಸಿಟಿ ಯೋಜನೆ ಸಂಪೂರ್ಣ ಅವೈಜ್ಞಾನಿಕವಾಗಿದ್ದಲ್ಲದೆ ಮಣ್ಣುಪಾಲು ಆಗುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಯೋಜನೆ ಎಷ್ಟು ಅವೈಜ್ಞಾನಿಕವಾಗಿದೆ ಎಂದರೆ ನಗರದ ರತ್ನಮ್ಮ ಮಾಧವರಾವ್ ರಸ್ತೆ (ಮ್ಯಾಕ್ಸ್-ಸರ್ಜಿ ಆಸ್ಪತ್ರೆ ಮಧ್ಯದ ರಸ್ತೆ)ಯಲ್ಲಿ ಕಳೆದ ೧೫ ದಿನಗಳಿಂದ ನಡೆಯುತ್ತಿರುವ ಯುಜಿಡಿ ಕಾಮಗಾರಿಯೇ ಸಾಕ್ಷಿಯಾಗಿದೆ.
ಕಳೆದ ೧೦ ವರ್ಷಗಳಿಂದ ಆಮೆ ವೇಗದಲ್ಲಿ ಕುಂಟುತ್ತಾ ಸಾಗಿ ಅಂತೂ-ಇಂತೂ ೨೦೨೪ರ ಮಾರ್ಚ್ ೩೧ಕ್ಕೆ ಸ್ಮಾರ್ಟ್ಸಿಟಿ ಯೋಜನೆಯ ಪ್ರದೇಶಗಳಲ್ಲಿ ಕಾಮಗಾರಿ ಪೂರ್ಣಗೊಂಡು ಮಹಾನಗರ ಪಾಲಿಕೆಗೆ ಹಸ್ತಾಂತರವಾಗಿದ್ದು, ಈಗ ಇತಿಹಾಸ. ಯೋಜನೆ ಕಾಮಗಾರಿ ಜಾರಿಯಲ್ಲಿರುವಾಗಲೇ ಅನೇಕ ಕಡೆ ಅವೈಜ್ಞಾನಿಕ ಕಾಮಗಾರಿಗಳ ಕುರಿತು ಅಪಸ್ವರ ವಿರೋಧಗಳು ಭುಗಿಲೆದ್ದಿದ್ದವು. ಕೆಲವು ಹಂತಗಳಲ್ಲಿ ಸ್ಥಳೀಯ ರಾಜಕಾರಣಿಗಳು ಪಾಲಿಕೆ, ಸ್ಮಾರ್ಟ್ಸಿಟಿ ಅಧಿಕಾರಿಗಳು, ಸಭೆ ಸೇರಿ ಗುಣಮಟ್ಟದ ಕಾಮಗಾರಿಯನ್ನು ಮಾಡಿಕೊಡುವುದಾಗಿ ಭರವಸೆ ನೀಡಿದ್ದವು. ಆದರೆ ಆ ಭರವಸೆಗಳೆಲ್ಲಾ ಕನಸಾಗಿಯೇ ಉಳಿದಿದ್ದು ಶೋಚನೀಯ ಎಂಬುದು ನಾಗರೀಕರ ಅಸಮಾಧಾನವಾಗಿದೆ.

ನಗರದ ಅನೇಕ ಕಡೆ ಸ್ಮಾರ್ಟ್ಸಿಟಿ ಲಿಮಿಟೆಡ್ ಒಳಚರಂಡಿ, ರಸ್ತೆ, ೨೪ಘಿ ೭ ಕುಡಿಯುವ ನೀರು ಸರಬರಾಜು, ಉದ್ಯಾನವನ, ಅಂಡರ್ಗ್ರೌಂಡ್ ವಿದ್ಯುತ್ ವಾಹನ ಅಳವಡಿಕೆ, ಆಕರ್ಷಕ ಬೀದಿ ದೀಪ ವ್ಯವಸ್ಥೆ ಇತ್ಯಾದಿ ಕಾಮಗಾರಿಗಳನ್ನು ಕೈಗೊಂಡಿದ್ದು ಅವುಗಳಲ್ಲಿ ಬಹುತೇಕ ಕಾಮಗಾರಿಗಳು ಕಳಪೆ ಕಾಮಗಾರಿಗಳಾಗಿವೆ ಎಂಬುದು ದಿನೇ ದಿನೇ ಸಾಬೀತಾಗುತ್ತಿದೆ.
ಇದಕ್ಕೆ ಪುಷ್ಠಿ ಕೊಡುವಂತೆ ರತ್ನಮ್ಮ ಮಾಧವರಾವ್ ರಸ್ತೆಯಲ್ಲಿ ನಡೆಯುತ್ತಿರುವ ಯುಜಿಡಿ ಕಾಮಗಾರಿ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ರಸ್ತೆಯಲ್ಲಿ ಈ ಮೊದಲು ಕಲ್ಲಿನಿಂದ ನಿರ್ಮಾಣವಾದ ಹಳೆಯ ಯುಜಿಡಿ ಇತ್ತು. ಬಳಿಕ ಇಲ್ಲಿ ದೊಡ್ಡ ದೊಡ್ಡ ಆಸ್ಪತ್ರೆಗಳ ತಲೆ ಎತ್ತಿದ್ದರಿಂದ ಹಳೆಯ ಯುಜಿಡಿ ತ್ಯಾಜ್ಯಗಳ ಭಾರವನ್ನು ತಡೆಯಲಾಗದೆ ಸ್ಥಳೀಯ ಆಸ್ಪತ್ರೆಗಳ ಕೋರಿಕೆ ಮೇರೆಗೆ ಈಗ ಸ್ಮಾರ್ಟ್ಸಿಟಿ ರಸ್ತೆಯನ್ನು ಅಗೆದು ಹೊಸ ಯುಜಿಡಿ ನಿರ್ಮಾಣಗೊಳ್ಳುತ್ತಿದೆ. ಸ್ಮಾರ್ಟ್ಸಿಟಿ ಯೋಜನೆ ಜಾರಿ ಮಾಡುವಾಗ ಭವಿಷ್ಯದ ಯುಜಿಡಿಯ ಕಲ್ಪನೆಯನ್ನು ಸಂಬಂಧಿಸಿದ ಇಂಜಿನಿಯರ್ಗಳು ಮಾಡದೇ ಇರುವುದು ಸಖೇದಾಚರ್ಯವನ್ನುಂಟು ಮಾಡಿದೆ.

ಈಗಾಗಲೇ ಸ್ಮಾರ್ಟ್ಸಿಟಿ ಯೋಜನೆಯಡಿ ಸಾವಿರಾರು ಕೋಟಿ ರೂ. ವೆಚ್ಚಮಾಡಿ ಕಾಮಗಾರಿ ಕೈಗೊಂಡಿದ್ದರೂ ಕಾಮಗಾರಿಯ ಅನುಷ್ಠಾನದ ಸಂದರ್ಭದಲ್ಲಿ ಸರಿಯಾದ ಮುಂದಾಲೋಚನೆ, ಪ್ಲಾನಿಂಗ್ ಇಲ್ಲದೆ ಕಾಮಗಾರಿ ಅನುಷ್ಠಾನ ಮಾಡಿದ್ದರ ಪರಿಣಾಮ ಈಗ ಸಾರ್ವಜನಿಕರು ಅದಕ್ಕೆ ಬೆಲೆ ತೆರುವಂತಾಗಿದೆ.
ಈಗಾಗಲೇ ಬಹುಕೋಟಿ ವೆಚ್ಚವಾಗಿರುವ ಯೋಜನಾ ಸ್ಥಳಗಳಲ್ಲಿಯೇ ಮತ್ತೆ ಕಾಮಗಾರಿ ಆರಂಭಿಸಿ, ೧೫-೨೦ ದಿವಸಗಳ ಕಾಲ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಕೊಡುತ್ತಿರುವುದಲ್ಲದೆ ಮತ್ತೆ ಸಾರ್ವಜನಿಕರ ಹಣವನ್ನು ಮಹಾನಗರಪಾಲಿಕೆ ವೆಚ್ಚ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ನಾಗರೀಕರು ಪ್ರಶ್ನಿಸುತ್ತಿದ್ದಾರೆ. ನಗರದ ಸೌಂದರ್ಯಿಕರಣಕ್ಕೆಂದೇ ಸ್ಮಾರ್ಟ್ಸಿಟಿ ಯೋಜನೆ ಅನುಷ್ಟಾನವಾದರೂ ಅದು ಸರಿಯಾಗಿ ಕಾರ್ಯರೂಪದ ಬರದೇ ಇರುವುದಕ್ಕೆ ಜವಾಬ್ದಾರಿ ಯಾರು ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.
ಸರಿಯಾದ ಪ್ಲಾನಿಂಗ್ ಇಲ್ಲದೆ ರಸ್ತೆ ಡಾಂಬರೀಕರಣ, ಬೀದಿ ದೀಪದ ವ್ಯವಸ್ಥೆ, ನೆಲಕ್ಕೆ ಲಿಂಕ್ಡ್ ಟೈಲ್ಸ್ ಅಳವಡಿಕೆ ಮಾಡಿ ರಸ್ತೆಯನ್ನು ಸಾರ್ವಜನಿಕ ಉಪಯೋಗಕ್ಕೆ ಬಿಟ್ಟು ಈಗ ಮತ್ತೆ ರಸ್ತೆ ಅಗೆದು ಒಳಚರಂಡಿ ಸಂಪರ್ಕ ಕಲ್ಪಿಸಲು ಪೈಪ್ಲೈನ್ ಅಳವಡಿಕೆ, ಮ್ಯಾನ್ಹೋಲ್ ನಿರ್ಮಾಣ ಮೊದಲಾದವುಗಳನ್ನು ಮಾಡಲು ಸಾರ್ವಜನಿಕರ ತೆರಿಗೆ ಹಣವನ್ನು ಮಹಾನಗರ ಪಾಲಿಕೆ ಪೋಲು ಮಾಡುತ್ತಿರುವುದು ಪಾಲಿಕೆಯ ಬೇಜಾಬ್ದಾರಿ ಆಡಳಿತಕ್ಕೆ ಹಿಡಿದ ಕೈಗನ್ನಡಿ ಎಂದೇ ಭಾವಿಸಲಾಗುತ್ತಿದೆ. ಸ್ಮಾರ್ಟ್ಸಿಟಿ ಯೋಜನೆಯ ಅಡಿಯಲ್ಲಿ ನಿರ್ಮಾಣಗೊಂಡ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದರೆ, ಅದೇ ಸ್ಥಳದಲ್ಲಿ ಪುನಃ ದುರಸ್ತಿ ಅಥವಾ ಬೇರೆಯದೇ ಕಾಮಗಾರಿಯನ್ನು ಕೈಗೊಳ್ಳಲು ಅನಿವಾರ್ಯವಾದರೆ ಅವುಗಳಿಗೆ ತಗಲುವ ವೆಚ್ಚವನ್ನು ಸ್ಮಾರ್ಟ್ಸಿಟಿ ಅಥವಾ ಪಾಲಿಕೆ ಅಧಿಕಾರಿಗಳಿಂದಲೇ ವಸೂಲಿಮಾಡಿ, ಭರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಸ್ಮಾರ್ಟ್ಸಿಟಿ ಲಿ., ಕಾಮಗಾರಿ ಕೈಗೊಂಡ ಕೆಲ ಪ್ರದೇಶಗಳಲ್ಲಿ ನ್ಯೂನ್ಯತೆಗಳು ಕಂಡು ಬಂದಿವೆ. ಆ ಪ್ರದೇಶಗಳಲ್ಲಿ ಪುನಃ ಕಾಮಗಾರಿ ಕೈಗೊಳ್ಳಲು ರಾಷ್ಟ್ರೀಯ ಹಸಿರು ಮಂಡಳಿಯಿಂದ ಅನುದಾನ ಬಿಡುಗಡೆಯಾಗಿದೆ. ಕರ್ನಾಟಕ ಅರ್ಬನ್ ಡೆವಲಪ್ಮೆಂಟ್ ಕಾರ್ಪೋರೇಷನ್(ಕೆಯುಡಿಸಿ)ನಿಂದ ಪಾಲಿಕೆಗೆ ಅನುದಾನ ಬರುತ್ತಿದೆ. ಆ ಹಣದಲ್ಲಿ ರತ್ನಮ್ಮ ಮಾಧವರಾವ್ ರಸ್ತೆಯ ಒಳಚರಂಡಿ ವ್ಯವಸ್ಥೆ ಸೇರಿದಂತೆ ಇನ್ನಿತರ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ.
-ಕೆ. ಮಾಯಣ್ಣಗೌಡ, ಪೌರಾಯುಕ್ತರು
ಈ ರಸ್ತೆಯಲ್ಲಿ ಹಳೆಯ ಯುಜಿಡಿ ಸ್ಟೋನ್ವೇರ್ನಿಂದ ನಿರ್ಮಿತವಾಗಿತ್ತು. ಆಸ್ಪತ್ರೆಗಳು ಇದಕ್ಕೆ ಸಂಪರ್ಕ ಕಲ್ಪಿಸಿಕೊಂಡಿರಲಿಲ್ಲ. ಆಸ್ಪತ್ರೆಯ ಮುಖ್ಯಸ್ಥರು ಈ ರಸ್ತೆಯಲ್ಲಿ ತಮಗೆ ಅನುಕೂಲವಾಗುವಂತೆ ಹೊಸ ಯುಜಿಡಿ ನಿರ್ಮಿಸಿಕೊಡಲು ಪಾಲಿಕೆಗೆ ವಿನಂತಿಸಿಕೊಂಡಿದ್ದರು. ಅದನ್ನು ಪಾಲಿಕೆ ನಿರ್ವಹಿಸಿದೆ. ಹೊಸ ಯುಜಿಡಿಗೆ ತಗಲುವ ವೆಚ್ಚವನ್ನು ಪಾಲಿಕೆಯಿಂದಲೇ ಭರಿಸಲಾಗುತ್ತದೆ.
-ಪುಷ್ಪಾವತಿ, ಎಇಇ, ಮಹಾನಗರ ಪಾಲಿಕೆ.