ಶಿವಮೊಗ್ಗ,ಏ.8: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿರುವ ಪುರಾಣೇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಭೈರವೈಕ್ಯ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಗದ್ದುಗೆ ನೂತನವಾಗಿ ನಿರ್ಮಾಣವಾಗಿರುವ ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆಗೆ ಸಿದ್ಧವಾಗಿದ್ದು, ಏಪ್ರಿಲ್ 15 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.
ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿರುವ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದ ಪಕ್ಕದಲ್ಲಿಯೇ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರನ್ನು ಸಮಾಧಿ ಮಾಡಲಾಗಿತ್ತು. ಶ್ರೀಗಳ ನಿಧನದ ಸಂದರ್ಭದಲ್ಲಿ ಗದ್ದುಗೆಯಲ್ಲಿ ತಾತ್ಕಾಲಿಕವಾಗಿ ಮಂಟಪ ನಿರ್ಮಿಸಲಾಗಿತ್ತು. ತದನಂತರ ಮೂಲ ಸಮಾಧಿಯ ಗದ್ದುಗೆಯನ್ನು ಯಥಾ ಸ್ಥಿತಿಯಲ್ಲಿರಿಸಿಕೊಂಡು, ಮಂಟಪವನ್ನು ತೆರವುಗೊಳಿಸಿ ಎರಡು ಅಂತಸ್ತುಗಳಲ್ಲಿ ಸಂಪೂರ್ಣವಾಗಿ ಕೆಂಪು ಶಿಲೆ ಹಾಗೂ ವಿವಿಧ ಬಗೆಯ ಕಲ್ಲುಗಳಿಂದ ನಿರ್ಮಿಸಲಾಗಿದೆ.
ಮೂಲ ಗದ್ದುಗೆಯನ್ನು ಯಾವುದೇ ಬದಲಾವಣೆ ಇಲ್ಲದೆ ಅದೇ ರೂಪದಲ್ಲಿಯೇ ಉಳಿಸಿಕೊಂಡು ಅದೇ ಸ್ಥಳದಲ್ಲಿಯೇ ಗದ್ದುಗೆ ನಿರ್ಮಿಸಿರುವುದು ವಿಶೇಷ. ಮಂಟಪದ ನೆಲ ಮಹಡಿಯಲ್ಲಿ ಗುರುಗಳ ಗದ್ದುಗೆ ಇರಲಿದ್ದು, ಗದ್ದುಗೆಯ ಸುತ್ತ ಪ್ರದಕ್ಷಿಣಾ ಸ್ಥಳ ಇದೆ. ನೆಲ ಮಹಡಿಯ ಮೇಲಿನ ಅಂತಸ್ತಿನಲ್ಲಿ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಪುತ್ಥಳಿ ಇರುವ ಭವ್ಯ ಮಂಟಪವಿದೆ.
ಬಿಜಿಎಸ್ ಸ್ಟೇಡಿಯಂನಲ್ಲಿ ವೇದಿಕೆ :
ನೂತನವಾಗಿ ನಿರ್ಮಿಸಲಾಗಿರುವ ಡಾ. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಗದ್ದುಗೆಯ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ 15 ರಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸಲಿದ್ದಾರೆ. ಮಂಟಪದ ಉದ್ಘಾಟನೆ ನಂತರ ಬಿಜಿಎಸ್ ಸ್ಟೇಡಿಯಂನಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
* ಕುಂಭಾಭಿಷೇಕ ಮಹೋತ್ಸವ, ಹಲವು ಗಣ್ಯರು ಬಾಗಿ,:*
ಏಪ್ರಿಲ್ 10 ರಿಂದ 12 ರವರೆಗೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿರವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯುವ ಶ್ರೀ ಗುರು ಬಾಲಗಂಗಾಧರನಾಥ ಮಹಾಸ್ವಾಮೀಜಿರವರ ಮೂಲ ವಿಗ್ರಹ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದ ಸಂದರ್ಭದಲ್ಲಿ ಕುಂಭಾಭಿಷೇಕ ಮಹೋತ್ಸವ ದೊಂದಿಗೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.
ಮೂರು ದಿನಗಳ ಕಾಲ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ನಾಡಿನ ಧರ್ಮ ಗುರುಗಳು,ಮಠಾಧೀಶರು, ಸಾಧು ಸಂತರು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.