ಬೆಂಗಳೂರು : ರಾಜ್ಯ ಕಾಂಗ್ರೆಸ್ಸಿನ ಅಲ್ಪಸಂಖ್ಯಾತ ಸಮುದಾಯದಲ್ಲಿ ದಿನದಿಂದ ದಿನಕ್ಕೆ ಜನಪ್ರಿಯ ನಾಯಕರಾಗಿ ಹೊರಹೊಮ್ಮುತ್ತಿರುವ ವಸತಿ ಸಚಿವ ಜಮೀರ್ ಅಹ್ಮದ್ ಖಾನ್’ಗೆ ಎಐಸಿಸಿಯಲ್ಲಿ ಮಹತ್ವದ ಜವಾಬ್ದಾರಿಯನ್ನು ನೀಡಲಾಗಿದೆ. ಜಮೀರ್ ಅಹ್ಮದ್’ಗೆ ಇರುವ ಜನಪ್ರಿಯತೆಯನ್ನು ಮನಗಂಡು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ರಾಜ್ಯದ ಎರಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರಚಾರಕ್ಕೆ ಬರಲಾಗದಷ್ಟು, ಬ್ಯೂಸಿಯಾಗಿರುವ ಜಮೀರ್ ಅಹ್ಮದ್, ಕೇರಳ ಪ್ರಚಾರದಲ್ಲಿ ನಿರತರಾಗಿದ್ದಾರೆ. ಕೇರಳದ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳು ನಿರ್ಣಾಯಕವಾಗಿರುವುದರಿಂದ,

ವೇಣುಗೋಪಾಲ್, ಅವರನ್ನು ರಾಜ್ಯ ಪ್ರಚಾರಕ್ಕೆ ಕಳುಹಿಸಲು ಅವಕಾಶವನ್ನೇ ನೀಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಯಲ್ಲಿನ ಪ್ರಚಾರಕ್ಕಾಗಿ ಜಮೀರ್ ಅಹ್ಮದ್, ಏಪ್ರಿಲ್ ನಾಲ್ಕರಿಂದ ಮೂರು ದಿನ ಬರಬೇಕಾಗಿತ್ತು. ಪ್ರಮುಖವಾಗಿ, ದಾವಣಗೆರೆಯಲ್ಲಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್, ಅವರೇ ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ, ಜಮೀರ್ ಅವರನ್ನು ಕರೆಸುವಂತೆ
ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಜಮೀರ್, “ಮುಖ್ಯಮಂತ್ರಿಗಳು ಮೂರು ದಿನ ಬಂದು ಪ್ರಚಾರ ಮಾಡುವಂತೆ ಸೂಚಿಸಿದ್ದಾರೆ. ಆದರೆ, ಇಲ್ಲಿ ಕೇರಳದಲ್ಲಿ ಕೆಸಿ ವೇಣುಗೋಪಾಲ್ ನನ್ನನ್ನು ಬಿಡುತ್ತಲೇ ಇಲ್ಲ” ಎಂದು ಪ್ರತಿಕ್ರಿಯೆಯನ್ನು ನೀಡಿದ್ದಾರೆ.