
ಶಿವಮೊಗ್ಗ, ಏ.03:
ಹೆಚ್.ಎಸ್. ಜನಾರ್ಧನ ಬಿನ್ ಶ್ರೀನಿವಾಸ, ಹೊಸಗುಂದ ಗ್ರಾಮ, ಸಾಗರ ತಾಲ್ಲೂಕ್, ಶಿವಮೊಗ್ಗ ಜಿಲ್ಲೆ. ಅವರು ತಮ್ಮ ಜಮೀನಿನಲ್ಲಿ 2015-16 ನೇ ಸಾಲಿನಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮಕ್ಕೆ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆ ಬಾವಿಗಾಗಿ ಅರ್ಜಿ ಸಲ್ಲಿಸಿ ಕೊಳವೆಬಾವಿ ಕೊರೆಯಲು ಫಲಾನುಬಾವಿಯಾಗಿ ಆಯ್ಕೆಯಾಗಿದ್ದು, ಸದರಿ ಕೊಳವೆ ಬಾವಿ ಕೊರೆಯಿಸಿಕೊಡುವ ಬಗ್ಗೆ ಆರ್.ಎಸ್. ಪರಮೇಶ್ವರಪ್ಪ, ಜಿಲ್ಲಾ ವ್ಯವಸ್ಥಾಪಕರು, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕಛೇರಿ ಶಿವಮೊಗ್ಗ ಎಂಬಾತ ಪಿರ್ಯಾದುದಾರರಿಂದ ಲಂಚದ ಹಣಕ್ಕೆ ಬೇಡಿಕೆ ಇಟ್ಟ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.
ದಿನಾಂಕ: 13-07-2017 ರಂದು ಸದರಿ ಆಪಾದಿತ ಅಧಿಕಾರಿ ಪಿರ್ಯಾದುದಾರರಿಂದ 10,000/- ರೂ ಲಂಚದ ಹಣವನ್ನು ತಮ್ಮ ಕಛೇರಿಯಲ್ಲಿ ಪಡೆದುಕೊಳ್ಳುವಾಗ ಲೋಕಾಯುಕ್ತ ಟ್ರ್ಯಾಪ್ ಗೆ ಬಿದ್ದಿರುತ್ತಾರೆ. ಸದರಿ ಪ್ರಕರಣದ ತನಿಖಾಧಿಕಾರಿಯಾದ ಎ.ಚಂದ್ರಪ್ಪ, ಪೊಲೀಸ್ ಉಪಾಧೀಕ್ಷಕ ರವರು ಪ್ರಕರಣವನ್ನು ತನಿಖೆ ಕೈಗೊಂಡು ಆಪಾದಿತರ ವಿರುದ್ದ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.



ಮೇಲ್ಕಂಡ ಪ್ರಕರಣವು ಘನ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನಿನ್ನೆ ಘನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯ, ಶಿವಮೊಗ್ಗದ ನ್ಯಾಯಾಧೀಶ ರವರು ಪ್ರಕರಣದಲ್ಲಿ ವಿಚಾರಣೆ ನಡೆಸಿ ಆರೋಪ ದೃಡಪಟ್ಟ ಮೇರೆಗೆ ಆಪಾದಿತ ಆರ್.ಎಸ್. ಪರಮೇಶ್ವರಪ್ಪ, ಜಿಲ್ಲಾ ವ್ಯವಸ್ಥಾಪಕರು, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕಛೇರಿ ಶಿವಮೊಗ್ಗ ಅವರಿಗೆ ಎರಡು ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು 40.000/- ರೂ ದಂಡ ವಿಧಿಸಿ ಆದೇಶಿಸಿರುತ್ತಾರೆ. ಸರ್ಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕರಾದ ಎಂ.ಡಿ.ಸುಂದರ್ ರಾಜ್ ವಾದ ಮಂಡಿಸಿದ್ದರು ಎಂಬುದನ್ನು
ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
