ಶಿಕಾರಿಪುರ,ಮಾ.2:

ತಾಲ್ಲೂಕಿನ ಉಡುಗಣಿ ಸಮೀಪದ ಜಮೀನೊಂದರಲ್ಲಿ ಅನಧಿಕೃತವಾಗಿ ಸಂಗ್ರಹಿಸಿ ಇಟ್ಟಿದ್ದ 425 ಚೀಲ ಯೂರಿಯಾ ರಸಗೊಬ್ಬರವನ್ನು ಕೃಷಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಗ್ರಾಮದ ಸರ್ವೇ ನಂಬರ್ 74/2ರಲ್ಲಿ ಅನಧಿಕೃತವಾಗಿ ರಸಗೊಬ್ಬರ ಸಂಗ್ರಹಿಸಿ ಇಡಲಾಗಿದೆ ಎಂದು ಬೆಂಗಳೂರು ಕೃಷಿ ಇಲಾಖೆ ಕಚೇರಿಗೆ ದೂರು ನೀಡಿದ ಕಾರಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಪ್ಲಾಸ್ಟಿಕ್ ಚೀಲದಲ್ಲಿ ಗೊಬ್ಬರ ಇಟ್ಟಿರುವುದು ಗೊತ್ತಾಗಿದೆ.
₹ 1.13 ಲಕ್ಷ ಮೌಲ್ಯದ ರಸಗೊಬ್ಬರ ದಾಸ್ತಾನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಲಾಗಿದೆ.

ಜಮೀನು ಮಾಲೀಕ ‘ರಸಗೊಬ್ಬರದ ವಿಷಯ ಗೊತ್ತಿಲ್ಲ’ ಎಂದು ಹೇಳಿಕೆ ನೀಡಿದ್ದು, ವಶ ಪಡಿಸಿಕೊಂಡ ರಸಗೊಬ್ಬರವನ್ನು ಸಮೀಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಾಹಕರ ಗೋದಾಮಿನಲ್ಲಿ ಇಡಲಾಗಿದೆ. ಜಿಲ್ಲಾಧಿಕಾರಿಗಳ ಅನುಮತಿ ಪಡೆದು ರಸಗೊಬ್ಬರವನ್ನು ರೈತರಿಗೆ ವಿತರಿಸಲಾಗುವುದು ಎಂದು ಕೃಷಿ ಇಲಾಖೆ ಅಧಿಕಾರಿ ಕಿರಣ್ಕುಮಾರ್ ಹರ್ತಿ ಹೇಳಿದ್ದಾರೆ.