ಶಿವಮೊಗ್ಗ : ಜಿಲ್ಲಾ ರಕ್ಷಣಾಧಿಕಾರಿಗಳ ಕಛೇರಿಯಲ್ಲಿಂದು ಕಳೆದ ೩೫ಕ್ಕೂ ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿಸಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಕೆ. ರಮೇಶ್ ಕುಮಾರ್ ಹಾಗೂ ಎಎಸ್ಐ ಲಕ್ಷ್ಮಣ್ ಎಚ್.ಎನ್., ಮತ್ತು ಮುನಿಸ್ವಾಮಿ ಅವರು ಇಂದು ಸುಧೀರ್ಘ ಸೇವೆಯಿಂದ ಸೇವಾ ನಿವೃತ್ತಿಗೊಂಡಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಮತ್ತು ಇತರ ಸಿಬ್ಬಂದಿಗಳು ನಿವೃತ್ತರನ್ನು ಆತ್ಮೀಯವಾಗಿ ಗೌರವಿಸಿ ಬಿಳ್ಕೊಟ್ಟರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ನಿಖಿಲ್ ಮಾತನಾಡಿ, ನಿವೃತ್ತಿ ಸಾಮಾನ್ಯ ಪ್ರಕ್ರಿಯೆ. ಪೊಲೀಸ್ ಇಲಾಖೆಗೆ ತಮ್ಮ ಜೀವನದ ಬಹುಭಾಗವನ್ನು ದಾರೆ ಎರೆದಿದ್ದೀರಿ. ಇನ್ನು ಮುಂದೆ ಕುಟುಂಬಕ್ಕೆ ಸಮಯ ನೀಡಿ, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ಮತ್ತು ನಮಗೆ ಮಾರ್ಗದರ್ಶನ ನೀಡುತ್ತೀರಿ ಎಂದು ನಿವೃತ್ತ ಅಧಿಕಾರಿಗಳಿಗೆ ಹೇಳಿದರು.

ಈ ಸಂದರ್ಭದಲ್ಲಿ ನಿವೃತ್ತ ಸಿಬ್ಬಂದಿಗಳ ಕುಟುಂಬದೊಂದಿಗೆ ಮಾತನಾಡಿದ ಅವರು, ಪೊಲೀಸರು ೨೪ ಗಂಟೆ ತುರ್ತುಸೇವಾ ನಿರತರಾಗಿದ್ದು, ಅನೇಕ ಭಾರಿ ರಾತ್ರಿ ಎರಡು-ಮೂರು ಗಂಟೆಯ ಸಮಯಕ್ಕೆ ಮನೆಗೆ ಬಂದಾಗ ಕೂಡ ಸಿಟ್ಟಾಗದೆ ಕರ್ತವ್ಯಕ್ಕೆ ಪ್ರಾಧಾನ್ಯತೆ ನೀಡಿದ್ದಕ್ಕೆ ನಿಮಗೆ ಅತ್ಯಂತ ಹೃದಯಪೂರ್ವಕ ಧನ್ಯವಾದಗಳು ಎಂದು ತಿಳಿಸಿದ್ದು ವಿಶೇಷವಾಗಿತ್ತು. ಪೊಲೀಸ್ ಕುಟುಂಬ ಕೂಡ ಅಧೀಕ್ಷಕರಿಗೆ ನಮನ ಸಲ್ಲಿಸಿ ಭಾವನಾತ್ಮಕವಾಗಿ ಬೀಳ್ಕೊಟ್ಟ ರೋಚಕ ಕ್ಷಣಗಳು ಕಂಡು ಬಂದವು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕಾರ್ಯಪ್ಪ, ಉಪಾಧೀಕ್ಷಕರುಗಳಾದ ಬಾಬು ಅಂಜನಪ್ಪ, ಸಂಜೀವ್ಕುಮಾರ್ ಹಾಗೂ ಪಿಐಗಳಾದ ಸಂತೋಷ್ಕುಮಾರ್, ರಾಘವೇಂದ್ರ ಖಂಡಿಕೆ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ನಿವೃತ್ತ ಪೊಲೀಸರ ಕುಟುಂಬಸ್ಥರು ಇದ್ದರು.