ಶಿವಮೊಗ್ಗ : ಕರ್ನಾಟಕ ರಾಜ್ಯ ಸರ್ಕಾರ ಮರ್ಯಾದಾಗೇಡು ಹತ್ಯೆಗಳನ್ನು ನಿಷೇಧಿಸಿ ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿನ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ (ಇವ ನಮ್ಮವ, ಇವ ನಮ್ಮವ) ವಿಧೇಯಕ, 2026 ಅನುಮೋದಿಸಿರುವುದು ಅತ್ಯಂತ ಸ್ವಾಗತಾರ್ಹ ಮತ್ತು ಅಭಿನಂದನೀಯ ನಿರ್ಧಾರವಾಗಿದೆ ಎಂದು ಹಿರಿಯ ಪತ್ರಕರ್ತ, ಸಾಮಾಜಿಕ ಹೋರಾಟಗಾರ ಎನ್.ರವಿಕುಮಾರ್ ತಿಳಿಸಿದರು.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಡೀ ದೇಶದಲ್ಲೇ ಜಾತಿ ಆಧಾರಿತ ದ್ವೇಷದಿಂದ ನಡೆಯುವ ಮರ್ಯಾದಾಗೇಡು ಹತ್ಯೆಗಳನ್ನು ನಿಷೇಧಿಸಿ ಕಾಯ್ದೆ ತಂದ ಮೊಟ್ಟ ಮೊದಲ ರಾಜ್ಯ ಕರ್ನಾಟಕವೇ ಆಗಿದೆ. ಈ ನಡೆ ಕರ್ನಾಟಕದ ವೈಚಾರಿಕ ಪರಂಪರೆ ಮತ್ತು ಸಮಾನತೆಯ ಸಂವಿಧಾನಿಕ ತತ್ವವನ್ನು ನೆಲೆಗೊಳಿಸುವ ಮತ್ತೊಂದು ಹೆಜ್ಜೆಯಾಗಿದೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಜಾತಿ ವೈಷಮ್ಯ ಆಧಾರಿತ ತಾರತಮ್ಯ, ಹಿಂಸೆ, ಕೊಲೆಯಂತಹ ಪಾಶವಿ ಕೃತ್ಯಗಳು ಹೆಚ್ಚಾಗುತ್ತಿದ್ದು, ಅದರಲ್ಲೂ ಜಾತಿ ಕಟ್ಟಳೆಗಳನ್ನು ಮೀರಿ ನಡೆಯುವ ಅಂತರ್ಜಾತಿ ವಿವಾಹವಾದವರನ್ನು ಪೆÇೀಷಕರೆ ಜಾತಿ ಶ್ರೇಷ್ಠತೆಯ ಮರ್ಯಾದೆ ಎಂಬ “ಪರಿಕಲ್ಪಿತ ಸಾಮಾಜಿಕ ವಿಕೃತ ಭ್ರಮೆ”ಯನ್ನು ಉಳಿಸಿಕೊಳ್ಳಲು ಹಲ್ಲೆ-ಹತ್ಯೆಗಳನ್ನು ಮಾಡುತ್ತಿದ್ದಾರೆ. ಎಂದ ಅವರು, ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್ಸಿಆರ್ಬಿ) ವರದಿಗಳ ಪ್ರಕಾರ ದೇಶದಲ್ಲಿ ಮರ್ಯಾದಾಗೇಡು ಹತ್ಯೆಗಳು ಹೆಚ್ಚಳವಾಗಿರುವ ಮುಖ್ಯವಾದ ಐದು ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿರುವುದು ಅತ್ಯಂತ ಕಳವಳಕಾರಿ ಸಂಗತಿ ಎಂದರು.

ಡಿಸೆಂಬರ್ 21, 2025 ರಂದು ಹುಬ್ಬಳ್ಳಿಯ ಇನಾಂ ವೀರಾಪುರದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಾದಿಗ ಸಮುದಾಯದ ಹುಡುಗನನ್ನು ಮದುವೆಯಾಗಿದ್ದ ಗರ್ಭಿಣಿ ಮಗಳನ್ನೇ ತಂದೆಯೊಬ್ಬ ಮರ್ಯಾದೆ ಹಸರಿನಲ್ಲಿ ಕೊಂದು ಹಾಕಿರುವುದು, ಹುಡುಗನ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಸಮಸಮಾಜದ ಕ್ರಾಂತಿಪುರುಷ ಬಸವಣ್ಣನವರ ಈ ನಾಡಿಗೆ ದೊಡ್ಡ ಕಳಂಕವಾಗಿದೆ ನಾಗರೀಕ ಸಮಾಜವನ್ನು ಕಾಪಾಡುವಲ್ಲಿ ರೂಪಿಸಲಾದ ಕಾನೂನು ಕಟ್ಟಳೆಗಳ ಭಯವೇ ಇಲ್ಲದೆ ಪೆÇೀಷಕರೇ ಸ್ವಂತ ಮಗಳನ್ನೆ ಕೊಂಡು ಹಾಕುವಷ್ಟು ಕ್ರೌರ್ಯಕ್ಕೆ ಇಳಿಯುತ್ತಾರೆ ಎಂದರೆ ಇದರ ಹಿಂದೆ ಸ್ಥಾಪಿತ ಜಾತಿಪ್ರತಿಷ್ಠೆ, ಮನೋವಿಕೃತಿ ಅಡಗಿರುವುದನ್ನು ನಿಚ್ಚಳವಾಗಿ ಕಾಣುತ್ತದೆ. ಇಂತಹ ಕ್ರೌರ್ಯಗಳನ್ನು ನಿಗ್ರಹಿಸಲು ಕಠಿಣ ಕಾನೂನು ರೂಪಿಸಬೇಕಾಗಿದೆ ಎಂಬ ಆಗ್ರಹದೊಂದಿಗೆ ಅಭಿಯಾನ ಮಾಡಲಾಗಿತ್ತು. ಅನೇಕ ಸಾರ್ವಜನಿಕ ಸಂಘಟನೆಗಳು ಹುಬ್ಬಳ್ಳಿಯ ಇನಾಂ ವೀರಾಪುರದ ಮಾನ್ಯಳ ಮರ್ಯಾದಾಹತ್ಯೆ ಘಟನೆಯನ್ನು ಖಂಡಿಸಿ ಪ್ರತಿಭಟನೆ ಮಾಡಿದ್ದವು, ಪ್ರತ್ಯೇಕ ಕಾಯ್ದೆಗೆ ಆಗ್ರಹಿಸಿದ್ದವು. ಮರ್ಯಾದಾಗೇಡು ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವಂತೆ ಒತ್ತಾಯಿಸಿ ಸಾಮಾಜಿಕ ಜಾಲ ತಾಣಗಳನ್ನು ಬಳಸಿಕೊಂಡು ನಡೆದ ಈ ಅಭಿಯಾನಕ್ಕೆ ನಾಡಿನ ಎಲ್ಲಾ ವರ್ಗದ ಮಾನವೀಯ ಸಂವೇದನೆಯುಳ್ಳ ಸಾವಿರಾರು ಜನ ಬೆಂಬಲ ವ್ಯಕ್ತಪಡಿಸಿದ್ದಲ್ಲದೆ, ಜ.1ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯದಲ್ಲಿ ಮರ್ಯಾದಾಗೇಡು ಹತ್ಯೆ ನಿಷೇಧಿಸಿ ಕಾನೂನನ್ನು ರೂಪಿಸಬೇಕೆಂಬ ಲಿಖಿತ ಮನವಿ ಪತ್ರವನ್ನು ನೀಡಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದರು. ಕಾನೂನು ತರುವ ಭರವಸೆ ನೀಡಿದ್ದರು ಎಂದರು.

ರಾಜ್ಯ ಕಾನೂನು ಸಚಿವರಾದ ಹೆಚ್.ಕೆ. ಪಾಟೀಲ್ ,ಗೃಹ ಸಚಿವ ಡಾ ಜಿ ಪರಮೇಶ್ವರ್, ಸಮಾಜಕಲ್ಯಾಣ ಸಚಿವ ಡಾ.ಹೆಚ್.ಸಿ. ಮಹಾದೇವಪ್ಪ ಅವರಿಗೂ ಕೂಡ ಮರ್ಯಾದಾಗೇಡು ಹತ್ಯೆ ನಿಷೇಧಿಸಿ ಕಾಯ್ದೆಯ ಅಗತ್ಯತೆಯನ್ನು ಮನವರಿಕೆ ಮಾಡಿಕೊಡಲಾಯಿತು. ಈಗ ಈ ಕುರಿತು ಕಾನೂನು ರೂಪಿಸುವುದರ ಮೂಲಕ ಜಾತಿ ವಿನಾಶಕ್ಕೆ ಅಥವಾ ಜಾತಿ ಆಧಾರಿತ ತಾರತಮ್ಯ, ಹಿಂಸೆಗಳಿಗೆ ಅಂತರ್ಜಾತಿ ವಿವಾಹಗಳು ಪರಿಹಾರ ಎಂದು ಹೋರಾಡಿದ, ಅದಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡ ಮಹಾಮಾನವತಾವಾದಿಗಳಾದ ಬಸವಣ್ಣ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಸಂದ ಗೌರವ ಇದಾಗಿದೆ ಎಂದು ಬಣ್ಣಿಸಿದರು.

ದೇಶದಲ್ಲಿ ಮರ್ಯಾದಾಗೇಡು ಹತ್ಯೆಗಳಿಗೆ ತುತ್ತಾದ ಎಲ್ಲ ಜೀವಗಳಿಗೆ ತಾತ್ವಿಕ ನ್ಯಾಯವನ್ನು ಒದಗಿಸಿದಂತಾಗಿದೆ. ರಾಜ್ಯ ಸರ್ಕಾರದ ಈ ಮಹತ್ವದ ಕ್ರಮದಿಂದ ಸಮಸಮಾಜ ನಿರ್ಮಾಣ ಮಾಡುವ ಸಂಕಲ್ಪಗಳಿಗೆ, ಹೋರಾಟಗಳಿಗೆ ಕಾನೂನು ಮತ್ತು ನೈತಿಕ ಬಲ ಬಂದಂತಾಗಿದೆ. 2026ನ್ನು ರೂಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಹೆಚ್.ಕೆ. ಪಾಟೀಲ್, ಗೃಹಸಚಿವ ಡಾ.ಜಿ. ಪರಮೇಶ್ವರ್, ಸಮಾಜಕಲ್ಯಾಣ ಸಚಿವ ಡಾ.ಹೆಚ್.ಸಿ ಮಹಾದೇವಪ್ಪ ಸೇರಿದಂತೆ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಾದ ದೇಶಾದ್ರಿ ಹೊಸ್ಮನೆ, ಎಸ್.ಆರ್.ರಂಜಿತ್ ಇದ್ದರು.