ಶಿವಮೊಗ್ಗ : ಶೇ.೩೩ರ ಮಹಿಳಾ ಮೀಸಲಾತಿ ಜಾರಿಗೆ ಬರಲಿದ್ದು, ಇದರಿಂದ ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಾಗಲಿದೆ. ಇದು ಮಹಿಳೆಯರಿಗೆ ನೀಡುವ ರಾಜಕೀಯ ಗೌರವವಾಗಿದೆ ಎಂದು ರಾಷ್ಟ್ರಭಕ್ತ ಬಳಗದ ಮುಖ್ಯಸ್ಥ ಹಾಗೂ ಯುವ ಮುಖಂಡ ಕೆ.ಈ. ಕಾಂತೇಶ್ ಹೇಳಿದರು.

ಅವರು ಮಂಗಳವಾರ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಮಹಿಳೆಯರು ಇಂದು ಎಲ್ಲಾ ರಂಗಗಳಲ್ಲಿಯೂ ಮುಂದೆ ಇದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪೂಜ್ಯ ಸ್ಥಾನವಿದೆ. ಅದರಲ್ಲೂ ತಾಯಿ ಸ್ಥಾನ ನಮ್ಮಲ್ಲಿ ಬಹುದೊಡ್ಡದು. ಅಮ್ಮನೇ ನಮಗೆ ಧೈವ ಹಾಗಾಗಿ ತಂದೆ-ತಾಯಿಯನ್ನು ಯಾರೂ ಕೂಡ ಮರೆಯಬಾರದು ಎಂದರು.
ಮುಂದಿನ ಜನಗಣತಿ ನಂತರ ಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಬರಲಿದ್ದು, ಇದರಿಂದ ಮಹಿಳೆಯರ ಸ್ಥಾನ-ಮಾನಗಳು ಮತ್ತಷ್ಟು ಗಟ್ಟಿಗೊಳ್ಳಲಿದೆ. ಜಿಲ್ಲೆಯಲ್ಲಿ ಕನಿಷ್ಠ ಮೂರು ಕ್ಷೇತ್ರಗಳಲ್ಲಿ ಮಹಿಳೆಯರೇ ಶಾಸಕರಾಗುತ್ತಾರೆ. ಇದು ಮಹಿಳಾ ಸಬಲೀಕರಣಕ್ಕೆ ಇಟ್ಟ ದಿಟ್ಟ ಹೆಜ್ಜೆಯಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷೆ ಭಾರತೀ ರಾಮಕೃಷ್ಣ ನಮ್ಮ ಸಂಘಟನೆಯು ಕೇವಲ ಜಾತಿ, ಧರ್ಮಕ್ಕೆ ಮೀಸಲಾಗಿಲ್ಲ ಎಲ್ಲಾ ವರ್ಗದ ಮಹಿಳೆಯರ ಗೌರವವನ್ನು ಸ್ವಾಭಿಮಾನವನ್ನು ಕಾಪಾಡುವ ಜವಾಬ್ದಾರಿ ನಮ್ಮದಾಗಿದೆ. ಈ ಹಿನ್ನಲೆಯಲ್ಲಿ ಸಂಘದವತಿಯಿಂದ ಕೌಶಲ್ಯಾ ತರಬೇತಿ ಸೇರಿದಂತೆ ಹಲವು ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.

ಜಿಲ್ಲಾ ಒಕ್ಕಲಿಗರ ಸಂಘದ ಮುಖಂಡ ರಮೇಶ್ ಹೆಗ್ಡೆ ಮಾತನಾಡಿ, ಮಹಿಳೆ ಇಂದು ಎಲ್ಲಾ ರಂಗಗಳಲ್ಲಿಯೂ ಮುಂದೆ ಇದ್ದಾಳೆ. ಸ್ವಾಭಿಮಾನದ ಪ್ರತೀಕವಾಗಿದ್ದಾಳೆ ಇಂದು ಪುರುಷರಿಗಿಂತ ಯಾವ ವಿಷಯದಲ್ಲೂ ಕಡಿಮೆ ಇಲ್ಲ. ಅದರಲ್ಲೂ ಒಕ್ಕಗಲಿಗರ ಮಹಿಳಾ ಸಂಘಟನೆ ಪಕ್ಷಾತೀತವಾಗಿ ಎಲ್ಲರನ್ನೂ ಕರೆದು, ಸನ್ಮಾನಿಸಿ ಗೌರವಿಸುತ್ತಿರುವುದು ಸ್ವಾಗತದ ವಿಷಯವಾಗಿದೆ. ಪಕ್ಷ ಯಾವುದೇ ಇರಲಿ ಅದಕ್ಕಿಂತ ಪ್ರೀತಿ-ವಿಶ್ವಾಸಗಳೇ ಮುಖ್ಯ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಯಲಕ್ಷ್ಮೀ ಈಶ್ವರಪ್ಪ ಅವರು ಕಾರ್ಯಕ್ರಮ ಯಶಸ್ವಿಯಾಗಲಿ, ಮಹಿಳಾ ಸಾಧಕಿಯರಿಗೆ ಗೌರವಿಸುತ್ತಿರುವುದು ಸಂತೋಷದ ವಿಷಯ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸ್ನೇಹವಾಹಿನಿ ಸಂಘದ ಅಧ್ಯಕ್ಷೆ ಎಸ್.ವಿ. ಚಂದ್ರಕಲಾ ಸೇರಿದಂತೆ ಹಲವು ಸಾಧಕಿಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ನೇತ್ರಾವತಿಗೌಡ, ಉಪಾಧ್ಯಕ್ಷೆ ಸುಜಾತ ನಿಂಗೇಗೌಡ, ಪ್ರಧಾನ ಕಾರ್ಯದರ್ಶಿ ಶಶಿಕಲಾ ಪ್ರಶಾಂತ್, ಸಹಕಾರ್ಯದರ್ಶಿ ಮಂಜುಳಾ ರವಿ, ಖಜಾಂಚಿ ಮಾಲಾರಾಮಪ್ಪ, ಕುವೆಂಪು ವಿವಿ ಪ್ರಾಧ್ಯಾಪಕಿ ಅನುರಾಧ ಪಾಟೀಲ್, ಮಾಜಿ ಮೇಯರ್, ಸುವರ್ಣಾಶಂಕರ್ ಸೇರಿದಂತೆ ಸಂಘಟನೆಯ ನಿರ್ದೇಶಕರು ಉಪಸ್ಥಿತರಿದ್ದರು.