ಶಿವಮೊಗ್ಗ: ನಗರದ ಸಿ.ಬಿ.ಆರ್ ಕಾನೂನು ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳಾದ ಸಂಮ್ಯಕ್ತ.ಎಸ್, ಅನನ್ಯಾ ಶಾಸ್ತ್ರೀ, ಕೆ.ಎಸ್.ರಕ್ಷಿತಾ ರವರು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ಹೈಕೋರ್ಟ್ ರಿಜಿಸ್ಟಾರ್ ಜನರಲ್ ಪ್ರಕಟಿಸಿದ 83 ಅಭ್ಯರ್ಥಿಗಳ ಅಂತಿಮ ಪಟ್ಟಿಯಲ್ಲಿ ಈ ಮೂವರು ವಿದ್ಯಾರ್ಥಿಗಳು ಅಗ್ರ ಸ್ಥಾನ ಪಡೆದಿದ್ದಾರೆ.
24 ನೇ ವಯಸ್ಸಿನ ಸಂಮ್ಯಕ್ತ ರವರ ತಂದೆ ಶಾಂತರಾಜ್ ಸರ್ಕಾರಿ ಅಭಿಯೋಜಕರಾಗಿದ್ದು, ತಾಯಿ ಪದ್ಮಾವತಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣ ಚನ್ನರಾಯಪಟ್ಟಣದಲ್ಲಿ ಪಡೆದ ಅವರು, ಶಿವಮೊಗ್ಗದ ವಿಕಾಸ ವಿದ್ಯಾಸಂಸ್ಥೆಯಲ್ಲಿ 6 ರಿಂದ ಎಸ್ಎಸ್ಎಲ್ಸಿ ವರೆಗೆ ವ್ಯಾಸಂಗ ಮಾಡಿದರು. ಬಳಿಕ ಪೇಸ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಪೂರ್ಣಗೊಳಿಸಿ, ಸಿಬಿಆರ್ ಕಾನೂನು ಕಾಲೇಜಿನಲ್ಲಿ ಎಲ್ಎಲ್ಬಿ, ಎಲ್ಎಲ್ಎಂ ಪದವಿ ಪಡೆದರು. ವಕೀಲರಾದ ಅನಂತದತ್ತಾ ಅವರ ಮಾರ್ಗದರ್ಶನದಲ್ಲಿ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು.

ಮತ್ತೋರ್ವ ಹಿರಿಯ ವಿದ್ಯಾರ್ಥಿನಿ ಅನನ್ಯಾ ಶಾಸ್ತ್ರೀ ರವರು, ತಂದೆ ಉಮಾಕಾಂತ ಶಾಸ್ತ್ರೀ ಮತ್ತು ತಾಯಿ ವಿಜಯಾ ಶಾಸ್ತ್ರೀ ಅವರ ಕನಸಿನಂತೆ, 25 ನೇ ವಯಸ್ಸಿನಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಯನ್ನು ಭದ್ರಾವತಿ ಸತ್ಯಸಾಯಿ ಶಾಲೆಯಲ್ಲಿ ಪಡೆದು, ಜಾವಳ್ಳಿಯ ಅರಬಿಂದೊ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪೂರೈಸಿದರು. ಸಹ್ಯಾದ್ರಿ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದ ಬಳಿಕ, ಸಿಬಿಆರ್ ಕಾನೂನು ಕಾಲೇಜಿನಲ್ಲಿ ಎಲ್ಎಲ್ಬಿ ಪದವಿ ಪಡೆದರು.
ರಿಪ್ಪನ್ಪೇಟೆ ಸಮೀಪದ ಕಾಳೇಶ್ವರದ ಕೆ.ಎಸ್.ರಕ್ಷಿತಾ ರವರು ತಮ್ಮ 26 ನೇ ವಯಸ್ಸಿನಲ್ಲಿ ಸಿವಿಲ್ ನ್ಯಾಯಾಧೀಶರಾಗಿ ನೇಮಕವಾಗಿದ್ದಾರೆ. ರೈತಾಪಿ ಕುಟುಂಬದ ಸತ್ಯನಾರಾಯಣ್ ಮತ್ತು ನಾಗರತ್ನ ದಂಪತಿಯ ಪುತ್ರಿ ರಕ್ಷಿತಾ ರವರು, ಪ್ರಾಥಮಿಕ ಶಿಕ್ಷಣವನ್ನು ಬಾಳೂರಲ್ಲಿ ಪೂರ್ಣಗೊಳಿಸಿ, ಹೈಸ್ಕೂಲ್ನಿಂದ ಪದವಿವರೆಗೆ ರಿಪ್ಪನ್ಪೇಟೆಯಲ್ಲಿ ಓದಿದರು. ನಂತರ ಸಿಬಿಆರ್ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ವಕೀಲರಾದ ಎಚ್.ಗಿರೀಶ್ ಅವರ ಮಾರ್ಗದರ್ಶನದಲ್ಲಿ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು.

ಸಾಧಕ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ಸಮಿತಿ ಆಡಳಿತ ಮಂಡಳಿ ಸದಸ್ಯರು, ಕಾಲೇಜಿನ ಪ್ರಾಂಶುಪಾಲರಾದ ಡಾ.ಎ.ಅನಲಾ ಮತ್ತು ಸಿಬ್ಬಂದಿ ವರ್ಗ ಅಭಿನಂದನೆಯನ್ನು ಸಲ್ಲಿಸಿದ್ದಾರೆ.