ಶಿವಮೊಗ್ಗ : ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರದ ಹಿನ್ನೆಲೆಯಲ್ಲಿರುವ ‘ಶೇಷ ೨೦೧೬’ ಚಿತ್ರವು ಮಾ.೬ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ನಿರ್ಮಾಪಕ ಉಮೇಶ್ ತಿಮ್ಮೇಗೌಡ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಚಿತ್ರವು ಕನ್ನಡ ಹಾಗೂ ಮಲೆಯಾಳಂ ಎರಡೂ ಭಾಷೆಗಳಲ್ಲಿ ಸಿದ್ಧವಾಗಿದ್ದು, ಕೇರಳದ ಮತ್ತು ಕರ್ನಾಟಕ ಪ್ರಮುಖ ನಟರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಮುಖವಾಗಿ ಜಾನ್ಕೈಪಲ್ಲಿ, ಪ್ರಮೋದ್ ಶೆಟ್ಟಿ ಹಾಗೂ ನಾಯಕನಟಿಯಾಗಿ ಅರ್ಚನಾ ಕೊಟ್ಟಿಗೆ ಅಭಿನಯಿಸಿದ್ದು, ಪ್ರಮುಖ ಪಾತ್ರದಲ್ಲಿ ದೇವರಾಜ್, ದಿನೇಶ್ ಮಂಗಳೂರು, ಸಿದ್ದಾರ್ಥ್, ಡೈನ್ ಡೇವಿ ಕಾಣಿಸಿಕೊಂಡಿದ್ದಾರೆ ಎಂದರು.

ನಿರ್ದೇಶಕ ಪ್ರಮೋದ್ ಅರಸೀಕೆರೆ ಮಾತನಾಡಿ, ಇದು ನನ್ನ ಮೊದಲ ನಿರ್ದೇಶನದ ಚಿತ್ರವಾಗಿದೆ. ಪೊಲೀಸ್ ಇಲಾಖೆಯಲ್ಲಿ ಕೆಲವು ಅಧಿಕಾರಿಗಳು ನಡೆಸುತ್ತಿರುವ ಭ್ರಷ್ಟಾಚಾರದ ಬಗ್ಗೆ ಇದು ಬೆಳಕು ಚೆಲ್ಲುತ್ತದೆ. ಮುಖ್ಯವಾಗಿ ವ್ಯವಸ್ಥೆಯನ್ನು ಪ್ರಶ್ನಿಸುವ ಮನೋಭಾವನೆ ಇಲ್ಲಿದೆ. ಸರ್ಕಾರದಲ್ಲಿ ಬೇರೆ ಬೇರೆ ಇಲಾಖೆಗೆ ಸಂಬಂಧಪಟ್ಟಂತೆ ಬೇರೆ ಬೇರೆ ಆಯ್ಕೆಗಳಿರುತ್ತವೆ. ಉದಾಹರಣೆಗೆ ಸರ್ಕಾರಿ ಆಸ್ಪತ್ರೆ ಸರಿ ಇಲ್ಲದಿದ್ದರೆ ಖಾಸಗಿ ಆಸ್ಪತ್ರೆಗೆ ಹೋಗಬಹುದು, ಸರ್ಕಾರಿ ಶಾಲೆಗಳು ಸರಿ ಇಲ್ಲದಿದ್ದರೆ ಖಾಸಗಿ ಶಾಲೆಗೆ ಹೋಗಬಹುದು. ಆದರೆ ಪೊಲೀಸ್ ಇಲಾಖೆಯೇ ಸರಿ ಇಲ್ಲದಿದ್ದರೆ ಬದಲೀ ವ್ಯವಸ್ಥೆಯೇ ಇಲ್ಲ. ಹಾಗಾಗಿ ಈ ವ್ಯವಸ್ಥೆಯ ಕುರಿತಂತೆ ಈ ಚಿತ್ರವಿದೆ ಎಂದರು.

ಚಿತ್ರದಲ್ಲಿ ಕುತೂಹಲವಿದೆ. ಮಲೆಯಾಳಂ ಭಾಷೆಯ ನಟರೂ ಸಹ ಸಮರ್ಥವಾಗಿ ನಟಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತವಿದ್ದು, ಆನಂದಕುಮಾರ್ರವರ ಛಾಯಾಗ್ರಹಣವಿದೆ. ಪ್ರಮೋದ್ ಶೆಟ್ಟಿಯವರ ಕೊಡುಗೆ ಈ ಚಿತ್ರಕ್ಕೆ ಸಾಕಷ್ಟು ಇದೆ. ಇದೊಂದು ವಿಶೇಷ ಚಿತ್ರವಾಗಿದ್ದು, ಮರಳಿಗುಡ್ಡ ಎಂಟರ್ಪ್ರೈಸಸ್ನವರ ಬ್ಯಾನರ್ ಅಡಿಯಲ್ಲಿ ಉಮೇಶ್ ತಿಮ್ಮೇಗೌಡ ಮತ್ತು ಮಂಜುವಾಣಿ ವಿ.ಎಸ್. ಹಾಗೂ ವೀಣಾ ಎಸ್. ಅವರ ನಿರ್ಮಾಣದಲ್ಲಿ ಈ ಚಿತ್ರ ಬಂದಿದೆ. ವಿಶೇಷವಾಗಿ ಶಿವಮೊಗ್ಗದ ಕಾರ್ಗಲ್ ಸುತ್ತಮುತ್ತ ಚಿತ್ರೀಕರಣವಾಗಿದೆ. ಕನ್ನಡಿಗರು ಈ ಚಿತ್ರವನ್ನು ಚಿತ್ರಮಂದಿರಕ್ಕೆ ಬಂದು ನೋಡಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಟರಾದ ಜಾನ್ ಕೈಪಲ್ಲಿ, ಸಾಯಿ ಭೈರವ, ಡೈನ್ ಡೇವಿ, ಸಿದ್ದಾರ್ಥ್ ಸೇರಿದಂತೆ ಹಲವರಿದ್ದರು.