ಶಿವಮೊಗ್ಗ : ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯಪಾನ ಮಾರಾಟ ಮಾಡುತ್ತಿರುವುದನ್ನು ನಿಷೇಧಿಸಬೇಕು ಮತ್ತು ಗ್ರಾಮೀಣ ಭಾಗದ ವಿವಿಧ ಮಾರ್ಗಗಳಲ್ಲಿ ನೂತನ ಬಸ್ ಸಂಚಾರ ಕಲ್ಪಿಸಬೇಕು ಎಂದು ಆಗ್ರಹಿಸಿ ಅರುಣೋದಯ ಮಹಿಳಾ ಜಿಲ್ಲಾ ಒಕ್ಕೂಟದ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ಸುತ್ತ-ಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅಕ್ರಮ ಮದ್ಯಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಪರವಾನಿಗೆ ಇಲ್ಲದ ಸಣ್ಣಪುಟ್ಟ ಅಂಗಡಿಗಳು, ಗೂಡಂಗಡಿಗಳು ಮತ್ತು ಕೆಲವು ಮನೆಗಳಲ್ಲಿಯೂ ಮದ್ಯವನ್ನು ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ. ಇದರ ಪರಿಣಾಮ ಹಳ್ಳಿಯ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಹಲವಾರು ಸಮಸ್ಯೆಗಳು ಉದ್ಭವವಾಗುತ್ತಿವೆ. ಕೌಟುಂಬಿಕ ಕಲಹ, ಯುವಜನತೆ ದಾರಿತಪ್ಪುತ್ತಿರುವುದು, ಗ್ರಾಮದ ಅಶಾಂತಿ, ಅವಾಚ್ಯಶಬ್ಧಗಳಿಂದ ನಿಂದನೆ, ಅಲ್ಲದೆ ದಾರಿಗಳಲ್ಲಿ ಮಕ್ಕಳು ಮತ್ತು ಮಹಿಳೆಯರು ಓಡಾಡುವುದೇ ದುಸ್ತರವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಭಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಆದುದರಿಂದ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಅಬಕಾರಿ ಹಾಗೂ ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ಅಕ್ರಮ ಮದ್ಯ ಮಾರಾಟವನ್ನು ನಿರ್ಮೂಲನೆ ಮಾಡಬೇಕು ಎಂದು ಒತ್ತಾಯಿಸಿದರು.

ಗ್ರಾಮೀಣ ಭಾಗಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ರೈತರು, ಸರ್ಕಾರಿ ನೌಕರರು ಮತ್ತು ಕೂಲಿ ಕಾರ್ಮಿಕರಿಗೆ ಪಟ್ಟಣಕ್ಕೆ ಬಂದು ಹೋಗಲು ಸರಿಯಾದ ಬಸ್ ಸೌಲಭ್ಯವಿಲ್ಲದೆ ತೊಂದರೆಗೀಡಾಗುತ್ತಿದ್ದಾರೆ. ಆದುದರಿಂದ ವಿಶೇಷವಾಗಿ ಭದ್ರಾವತಿ-ಕಲ್ಲಿಹಾಳ್ -ಸರ್ಕಲ್-ತಟ್ಟೆಹಳ್ಳಿ-ಕೈಮರ, ಸಿದ್ಲಿಪುರ-ಹುಲಿಮಟ್ಟಿ-ಮಂಡ್ಯ ಕ್ಯಾಂಪ್, ಕೈಮರ-ಅರಹತೊಳಲು-ವಡ್ಡರಹಟ್ಟಿ-ಚಂದನಕೇರೆ, ಶಿವಮೊಗ್ಗ-ಬಿ.ಬೀರನಹಳ್ಳಿ, ಶಿವಮೊಗ್ಗ-ಹೊನ್ನವಿಲೆ ಈ ಮಾರ್ಗಗಳಲ್ಲಿ ನಿರಂತರ ಬಸ್ ಸೌಲಭ್ಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷೆ ಗಂಗಾ, ಉಪಾಧ್ಯಕ್ಷೆ ಶಕುಂತಲಾ, ಪ್ರಮುಖರಾದ ವಿಶಾಲಾಕ್ಷಿ, ಶುಭಲಕ್ಷ್ಮೀ, ಕಾಳಿಬಾಯಿ, ಸುಶೀಲಮ್ಮ, ಶಾರದಾ, ಲಕ್ಷ್ಮೀದೇವಿ, ಜ್ಯೋತಿ, ಪವಿತ್ರ, ಸಾಜೀದಾ ಮೊದಲಾದವರಿದ್ದರು.