ಶಿವಮೊಗ್ಗ : ನಗರದ ಪಶ್ಚಿಮ ಸಂಚಾರ ಠಾಣೆಯ ಹೆಡ್ಕಾನ್ಸ್ಟೇಬಲ್ ಮಹಮ್ಮದ್ ಜಕ್ರೀಯ (55)ಇಂದು ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಠಾಣೆಯ ಹಿಂಭಾಗದಲ್ಲಿರುವ ವಾಶ್ರೂಮಿನ ಕಬ್ಬಿಣದ ಗೇಟಿಗೆ ನೇಣುಬಿಗಿದುಕೊಂಡು ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ.

ಸಾವನ್ನಪ್ಪಿದ ಜಕ್ರೀಯ ಅವರ ಬಗ್ಗೆ ಸಾರ್ವಜನಿಕರಲ್ಲಿ ಒಳ್ಳೆಯ ಅಭಿಪ್ರಾಯವಿದ್ದು, ಹಲವಾರು ವರ್ಷಗಳಿಂದ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಐದಾರು ತಿಂಗಳಿನಿಂದ ಅವರಿಗೆ ಅನಾರೋಗ್ಯ ಕಾಡುತ್ತಿತ್ತು. ಬೆನ್ನುನೋವಿಗೆ 2 ತಿಂಗಳು ರಜೆಯಲ್ಲಿದ್ದ ಅವರು, ಜನವರಿ 6ರಂದು ಮತ್ತೆ ಕೆಲಸಕ್ಕೆ ಹಾಜರಾಗಿದ್ದರು. ನಿನ್ನೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದು, ಸಹೋದ್ಯೋಗಿ ಹಾಗೂ ಹಿರಿಯ ಅಧಿಕಾರಿಯೊಬ್ಬರು ತನಗೆ ಕಿಂಡಲ್ ಮಾಡಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವಾಟ್ಸ್ ಅಪ್ ಮೇಸೇಜ್ ಕೂಡ ಹಾಕಿದ್ದರು ಎನ್ನಲಾಗಿದೆ.

ಈ ಬಗ್ಗೆ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ಬಳಿಕ ಮಾಹಿತಿ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಮೃತ ಜಕ್ರೀಯ ಪ್ರಾಮಾಣಿಕ ಸಿಬ್ಬಂದಿಯಾಗಿದ್ದು, ನಿನ್ನೆ ರಾತ್ರಿ ಕರ್ತವ್ಯದಲ್ಲಿದ್ದರೂ ಇಂದು ಬೆಳಗಿನ ಜಾವ 4ರಿಂದ 5ರ ಸುಮಾರಿನ ಮಧ್ಯದಲ್ಲಿ ಈ ಕೃತ್ಯವನ್ನು ಎಸಗಿದ್ದಾರೆ. ತಕ್ಷಣ ನಾವು ಅವರ ಕುಟುಂಬವನ್ನು ಸಂಪರ್ಕಿಸಿ ಅವರಿಗೆ ವಾಸ್ತವವನ್ನು ತಿಳಿಸಿದ್ದೇವೆ. ಅವರ ಕುಟುಂಬದ ಪ್ರಕಾರವೇ ಹಿಂದೆ ಒಂದು ಬಾರಿ ಕೂಡ ಅವರು ಆತ್ಮಹತ್ಯೆಗೆ ಯತ್ನಿಸಿ ತಲೆಗೆ ಏಟುಮಾಡಿಕೊಂಡಿದ್ದರು ಎನ್ನಲಾಗಿದೆ. ಮಾನಸಿಕ ಕಿನ್ನತೆಗೆ ಒಳಗಾಗಿದ್ದರು ಎಂದು ಕುಟುಂಬದವರು ತಿಳಿಸಿದ್ದು, ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಅವರ ವಾಟ್ಸ್ ಅಪ್ ಮೇಸೇಜ್ ಬಗ್ಗೆ ಮತ್ತು ಅವರ ಸಾವಿಗೆ ಏನಾದರೂ ಕಾರಣವಿದ್ದಲ್ಲಿ ಹೆಚ್ಚಿನ ತನಿಖೆಯನ್ನು ನಡೆಸಿ ವಿವರ ನೀಡುತ್ತೇವೆ ಎಂದು ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದ್ದಾರೆ.