ಶಿವಮೊಗ್ಗ, ಜ.2:
ನಶೆ ಮುಕ್ತ ಶಿವಮೊಗ್ಗವನ್ನಾಗಿಸುವುದು ನನ್ನ ಮೊದಲ ಆದ್ಯತೆ ಎಂದು ಶಿವಮೊಗ್ಗ ಜಿಲ್ಲಾ ನೂತನ ರಕ್ಷಣಾಧಿಕಾರಿ ಡಿ. ನಿಖಿಲ್ ಹೇಳಿದರು.
ಅವರು ಇಂದು ಡಿಎಆರ್ ಸಭಾಂಗಣದಲ್ಲಿ ಕರೆದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಮೂಲತಃ ಚಿತ್ರದುರ್ಗ ಜಿಲ್ಲೆಯವನಾಗಿದ್ದು, ಇಂಜಿನಿಯರಿಂಗ್ ಮುಗಿಸಿ 2017ರಲ್ಲಿ ಐಪಿಎಸ್ ಅಧಿಕಾರಿಯಾಗಿ ಬೆಂಗಳೂರು ಎಎನ್ಎಫ್ ಹಾಗೂ ಗಡಿಭಾಗದ ಜಿಲ್ಲೆಗಳಾದ ರಾಯಚೂರು ಮತ್ತು ಕೋಲಾರದಲ್ಲಿ ಕೆಲಸ ನಿರ್ವಹಿಸಿ ಈಗ ಮಧ್ಯ ಕರ್ನಾಟಕಕ್ಕೆ ಬಂದಿದ್ದೇನೆ. ಮಾಧ್ಯಮದವರು ಪೊಲೀಸ್ ವ್ಯವಸ್ಥೆ ಮತ್ತು ಸಾರ್ವಜನಿಕರ ನಡುವೆ ಸೇತುವೆ ಇದ್ದ ಹಾಗೆ. ನಮ್ಮ ಇಲಾಖೆಯ ಎಲ್ಲಾ ಒಳ್ಳೆಯ ಕೆಲಸ ಹಾಗೂ ನ್ಯೂನತೆಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ನೀವು ಮಾಡುತ್ತಿದ್ದೀರಿ. ಎಲ್ಲಾ ಜನತೆ ವಿಶ್ವಾಸದಿಂದ ಒಟ್ಟಿಗೆ ಸೇರಿ ಕೆಲಸ ಮಾಡೋಣ. ಈ ಜಿಲ್ಲೆಗೆ ಬಂದಿರುವುದು ನನ್ನ ಭಾಗ್ಯ ಎಂದರು.
ಪ್ರತಿಯೊಂದು ತಾಲ್ಲೂಕಿಗೂ ಅದರದೇ ಆದ ವೈವಿಧ್ಯತೆ ಇದೆ. ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ನಾಳೆಯಿಂದ ಪ್ರತೀ ಠಾಣೆಗೂ ಭೇಟಿ ನೀಡುತ್ತೇನೆ. ಇಲಾಖೆಯ ಜೊತೆ ನಿರಂತರ ಸಂಪರ್ಕಕ್ಕಾಗಿ ಪಬ್ಲಿಕ್ ಐ’ ಎಂಬ ಹೊಸ ವಾಟ್ಸ್ಅಪ್ ಗ್ರೂಪ್ ಪ್ರಾರಂಭವಾಗಲಿದ್ದು, ಸಾರ್ವಜನಿಕರು ತಮ್ಮ ಕುಂದು-ಕೊರತೆಗಳನ್ನು ಹಂಚಿಕೊಳ್ಳಬಹುದು. ನನಗೆ ವೈಯಕ್ತಿಕವಾಗಿ ದೂರವಾಣಿ ಕರೆ ಮಾಡಬಹುದು. ಒಂದು ವೇಳೆ ಕರೆ ಸ್ವೀಕರಿಸದಿದ್ದಾಗ ನನ್ನ ನಂಬರಿಗೆ ಮೇಸೇಜನ್ನು ಕೂಡ ಹಾಕಬಹುದು. ನಶೆಮುಕ್ತ ಶಿವಮೊಗ್ಗ ಮಾಡಲು ಡ್ರಗ್ಸ್ ವಿರುದ್ಧ ಸಮರವನ್ನೇ ಸಾರಲಿದ್ದೇವೆ ಎಂದರು. ಮುಂದಿನ ಯುವಪೀಳಿಗೆಗೆ ಡ್ರಗ್ಸ್ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಅದರ ದುಷ್ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡಲಾಗುವುದು. ಅದಕ್ಕಾಗಿಯೇಸನ್ಮಿತ್ರ’ ಎಂಬ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗುವುದು. ಸೈಬರ್ ಕ್ರೈಂ ನಿಯಂತ್ರಣಕ್ಕೆ ಮತ್ತು ಜಾಗೃತಿ ಮೂಡಿಸಲು ಸೂಕ್ತಕ್ರಮ ಕೈಗೊಳ್ಳಲಾಗುವುದು. ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸಿದರೆ ಆ ಮಕ್ಕಳು ತಮ್ಮ ಮನೆಗೆ ಎಲ್ಲಾ ಸದಸ್ಯರಿಗೂ ಸಂದೇಶವನ್ನು ರವಾನಿಸುತ್ತಾರೆ ಎಂದರು.
15 ದಿನಕ್ಕೊಮ್ಮೆ `ಆರಕ್ಷಕ ದಿನ’ ಆಚರಿಸಿ ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕುಂದು-ಕೊರತೆಗಳ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ರಸ್ತೆ ಅಪಘಾತವಾಗಿ ಒಂದು ಜೀವ ಹೋದರೂ ಸಹ ಅದು ತುಂಬಲಾರದ ನಷ್ಟವಾಗಿದ್ದು, ಜೀವ ಉಳಿಸಲು ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಲಿದೆ. ಪೊಲೀಸರ ದಂಡಕ್ಕೆ ಹೆದರಿ ಹೆಲ್ಮೆಟ್ ಹಾಕಬೇಡಿ. ನಿಮ್ಮ ಮನೆಯಲ್ಲಿ ನಿಮ್ಮನ್ನು ಪ್ರೀತಿಸುವ ಜೀವಕ್ಕಾಗಿ ನೀವು ಹೆಲ್ಮೆಟ್ ಹಾಕಿಕೊಳ್ಳಿ ಎಂದು ಜಾಗೃತಿ ಮೂಡಿಸಲಾಗುವುದು. ಶೂನ್ಯ ಜಾಗೃತಿ ಇದ್ದ ಕೋಲಾರದಲ್ಲಿ ನಾನು ಎಸ್ಪಿ ಆಗಿದ್ದಾಗ ಹೆಲ್ಮೆಟ್ ಧರಿಸುವ ಪ್ರಮಾಣ ಶೇ.65ಕ್ಕೆ ಏರಿತ್ತು. ಓಪನ್ಮೈಂಡ್-ಓಪನ್ಹ್ಯಾಂಡ್ ಪೊಲೀಸರೆಂದರೆ ಭಯ ಅಲ್ಲ, ಪೊಲೀಸರೆಂದರೆ ಭರವಸೆ ಎಂದರು.
ಯುಪಿಎಸ್ಸಿಯಲ್ಲಿ ನನ್ನ ಆಯ್ಕೆಯ ವಿಷಯ ಕನ್ನಡ ಸಾಹಿತ್ಯವಾಗಿತ್ತು. ಕಾನೂನಿನ ಗೌರವ ಕೊಡುವವರಿಗೆ ನಾನು ಸದಾ ಗೌರವ ಕೊಡುತ್ತೇನೆ. ರಾಜಕೀಯ ಒತ್ತಡ ಏನೇ ಇರಲಿ, ಕಾನೂನಾತ್ಮಕವಾಗಿಯೇ ಕೆಲಸ ಮಾಡಲಾಗುವುದು ಎಂದರು.
ಇಲಾಖೆಯ ಚೌಕಟ್ಟಿನಲ್ಲಿಯೇ ಕಾನೂನಾತ್ಮಕವಾಗಿ ಕೆಲಸ ಮುಂದುವರಿಸಲಾಗುವುದು. ಕೋಮುಸೌಹಾರ್ಧತೆ ಮೂಡಬೇಕಾದರೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆಯಾಗುತ್ತದೆ. ಅದರಲ್ಲಿ ಒಂದು ಕೈ ನಮ್ಮದು. ಇನ್ನೊಂದು ಸಾರ್ವಜನಿಕರದ್ದು ಎಂದರು.
ನಮ್ಮ ನ್ಯೂನ್ಯತೆಗಳು ಏನೇ ಇದ್ದರೂ ನಾವು ಸರಿಮಾಡಿಕೊಳ್ಳುತ್ತೇವೆ. ನೀವು ನಮ್ಮೊಂದಿಗೆ ಕೈಜೋಡಿಸಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳಾದ ರಮೇಶ್, ಕಾರ್ಯಪ್ಪ ಹಾಗೂ ಪ್ರೊಬೆಷನರಿ ಎಸ್ಪಿ ಮೇಘಾ ಅಗರ್ವಾಲ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.