ಸಾಗರ : ಸಮಾಜದ ಜೀವನಾಡಿಯೇ ದೇವಸ್ಥಾನ. ಆದ್ದರಿಂದಲೇ ಹಿರಿಯರು ದೇವಸ್ಥಾನ ಇಲ್ಲದ ಊರು ಇಲ್ಲ ಎಂದು ಹೇಳಿದ್ದು, ಅಯ್ಯಪ್ಪಸ್ವಾಮಿ ದೇವಸ್ಥಾನ ಶಬರಿಮಲೆಗೆ ಮಾತ್ರ ಸೀಮಿತವಾಗದೆ, ಮಲೆನಾಡಿನ ಸಾಗರ ವಿಶಾಲ ಜಾಗದಲ್ಲಿ ೯ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಅಯ್ಯಪ್ಪಸ್ವಾಮಿ ದೇವಸ್ಥಾನ ಅತ್ಯಂತ ಮಾದರಿಯಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಇಲ್ಲಿನ ಅಯ್ಯಪ್ಪಸ್ವಾಮಿ ದೇವಸ್ಥಾನ ಆವರಣದಲ್ಲಿ ಶುಕ್ರವಾರ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಸುಮಾರು ೯ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಯ್ಯಪ್ಪಸ್ವಾಮಿ ನೂತನ ದೇವಸ್ಥಾನದ ನೀಲನಕ್ಷೆ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಆಧ್ಯಾತ್ಮಿಕವಾಗಿ ಧಾರ್ಮಿಕವಾಗಿ ಶಕ್ತಿ ತುಂಬುವ ವಿಶೇಷ ವಾಸ್ತು ಹೊಂದಿರುವ ಸಾಗರದ ಅಯ್ಯಪ್ಪಸ್ವಾಮಿ ದೇವಸ್ಥಾನ ಭವಿಷ್ಯದಲ್ಲಿ ಅತ್ಯುನ್ನತ ಸ್ಥಾನಕ್ಕೆ ಹೋಗಲಿದೆ. ಪ್ರವಾಸೋದ್ಯಮ ಹಿನ್ನೆಲೆಯಲ್ಲೂ ಈ ಸ್ಥಳ ಪ್ರಸಿದ್ದಿಗೆ ಬರುವ ಸಾಧ್ಯತೆ ಇದೆ. ಭಾರತ ಆಧ್ಯಾತ್ಮಿಕ ಶಕ್ತಿಯಿಂದಾಗಿ ವಿಶ್ವಕ್ಕೆ ಪರಿಚಯವಾಗಿದೆ. ಇಂತಹ ದೇವಸ್ಥಾನಗಳ ಪಾತ್ರ ಸಹ ಅದರಲ್ಲಿದೆ. ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ನಮ್ಮ ಕಡೆಯಿಂದ ಅಗತ್ಯ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.

ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ತಾಲ್ಲೂಕಿನ ೧೪೦ ದೇವಸ್ಥಾನಗಳ ಅಭಿವೃದ್ದಿಗೆ ವಿಶೇಷ ಅನುದಾನ ನೀಡಲಾಗಿದೆ. ಅಯ್ಯಪ್ಪಸ್ವಾಮಿ ದೇವಸ್ಥಾನ ಅಭಿವೃದ್ದಿಗೆ ಸಹ ಅಗತ್ಯ ಸಹಕಾರ ನೀಡಲಾಗುತ್ತದೆ. ಸರ್ಕಾರದ ಜೊತೆಗೆ ಸಾರ್ವಜನಿಕರು ಸಹ ಇಂತಹ ದೇವಸ್ಥಾನ ನಿರ್ಮಾಣಕ್ಕೆ ಸಹಕಾರ ನೀಡಬೇಕು. ಮಹಾಗಣಪತಿ ದೇವಸ್ಥಾನ ನಿರ್ಮಾಣಕ್ಕೆ ಈಗಾಗಲೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ತಾಲ್ಲೂಕಿನಲ್ಲಿ ರಸ್ತೆ ಸೇರಿದಂತೆ ವಿವಿಧ ಅಭಿವೃದ್ದಿ ಕೆಲಸಗಳು ನಡೆಯುತ್ತಿದೆ ಎಂದರು.
ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಯಡಿಯೂರಪ್ಪ ಅವರು ಅಧಿಕಾರಲ್ಲಿದ್ದ ಸಂದರ್ಭದಲ್ಲಿ ರಾಜ್ಯದ ದೇವಸ್ಥಾನ ಮಠಮಂದಿರಗಳಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಸಾಗರ ಕ್ಷೇತ್ರದಲ್ಲಿ ೪೦೦ಕ್ಕಿಂತ ಹೆಚ್ಚು ಸಮುದಾಯ ಭವನಗಳಿಗೆ ಅನುದಾನ ನೀಡಿದ್ದಾರೆ. ಈಗಿನ ಸರ್ಕಾರ ಅತಿದೊಡ್ಡ ಬಜೆಟ್ ಘೋಷಣೆ ಮಾಡಿದ್ದಾರೆ. ಇಂತಹ ದೇವಸ್ಥಾನಗಳ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ತಿಳಿಸಿದರು.

ಟ್ರಸ್ಟ್ ಅಧ್ಯಕ್ಷ ಆರ್.ಚಂದ್ರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪೌರಾಯುಕ್ತ ಎಚ್.ಕೆ.ನಾಗಪ್ಪ, ಪ್ರಮುಖರಾದ ಟಿ.ಡಿ.ಮೇಘರಾಜ್, ಮಲ್ಲಿಕಾರ್ಜುನ ಹಕ್ರೆ, ರವೀಂದ್ರನ್, ಪ್ರಸಾದ್ ಇನ್ನಿತರರು ಹಾಜರಿದ್ದರು. ನಂತರ ಆಳ್ವಾಸ್ ಸಂಸ್ಥೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ದೀಪೋತ್ಸವ ಹಿನ್ನೆಲೆಯಲ್ಲಿ ವಿಶೇಷ ಸಿಡಿಮದ್ದಿನ ಪ್ರದರ್ಶನ ಗಮನ ಸೆಳೆಯಿತು.