ಬೆಳಗಾವಿ,ಡಿ.11:
ರಾಜ್ಯದ ಕೃಷಿ ಇಲಾಖೆಯಲ್ಲಿ ದೀರ್ಘಕಾಲದಿಂದ ಮುಂದುವರಿಯುತ್ತಿರುವ ಸಿಬ್ಬಂದಿ ಕೊರತೆಯನ್ನು ತುರ್ತಾಗಿ ಪರಿಹರಿಸಲು ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್. ಅರುಣ್ ಅವರು ಇಂದು ವಿಧಾನ ಪರಿಷತ್ತಿನ ಕಲಾಪದಲ್ಲಿ ಗಂಭೀರವಾಗಿ ವಿಷಯ ಪ್ರಸ್ತಾಪ ಮಾಡಿದರು.

ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಕೃಷಿ ಸಹಾಯಕ ನಿರ್ದೇಶಕರು,, ತಾಂತ್ರಿಕ ಸಿಬ್ಬಂದಿ ಹಾಗೂ ಕೃಷಿ ವಿಜ್ಞಾನಿಗಳ ಹುದ್ದೆಗಳು ದೊಡ್ಡ ಪ್ರಮಾಣದಲ್ಲಿ ಖಾಲಿ ಇರುವುದರಿಂದ ರೈತರಿಗೆ ತಲುಪಬೇಕಾದ ಸೇವೆಗಳು ವಿಳಂಬವಾಗುತ್ತಿರುವುದನ್ನು ಅವರು ಸ್ಪಷ್ಟವಾಗಿ ಗಮನಕ್ಕೆ ತಂದರು. ಪಿ.ಎಂ. ಕಿಸಾನ್, ಸಬ್ಸಿಡಿ ಪರಿಶೀಲನೆ, ಬೆಳೆಹಾನಿ ವರದಿ ಸೇರಿದಂತೆ ಹಲವು ಯೋಜನೆಗಳು ವಿಳಂಬವಾಗುತ್ತಿರುವ ಸ್ಥಿತಿಯನ್ನೂ ಡಿ. ಎಸ್.ಅರುಣ್ ಅವರು ಉಲ್ಲೇಖಿಸಿದರು.

ಗ್ರಾಮೀಣ ರೈತರಿಗೆ ತಕ್ಷಣದ ತಾಂತ್ರಿಕ ಸಲಹೆ ಸಿಗದೇ ಬೆಳೆ ನಷ್ಟವಾಗುತ್ತಿರುವುದು ರಾಜ್ಯದ ಕೃಷಿ ವಲಯಕ್ಕೆ ದೊಡ್ಡ ಹಿನ್ನಡೆ ಎಂದು ಹೇಳಿದರು, ಸಿಬ್ಬಂದಿ ನೇಮಕಾತಿಯನ್ನು ತಕ್ಷಣ ಕೈಗೊಳ್ಳಿ ಮತ್ತು ಇಲಾಖೆಯ ಕಾರ್ಯಕ್ಷಮತೆಯನ್ನು ಸುಧಾರಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದರು.