

ಕೊನೆಗೊಂದು ಚಂದ ಕವನ ಇದೆ ಓದಿ
ನೆಗಿಟೀವ್ ಥಿಂಕಿಂಗ್
ವಾರದ ಅಂಕಣ- 66
ಗಜೇಂದ್ರಸ್ವಾಮಿ ಎಸ್.ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ದಾಂಪತ್ಯ ಜೀವನಗಳು ಇತ್ತೀಚಿನ ದಿನಮಾನಗಳಲ್ಲಿ ಸಕ್ಕತ್ ಕಿರಿಕಿರಿ ಎನಿಸುವಂತಹ ಮಟ್ಟ ಮುಟ್ಟಿರುವುದು ನಮ್ಮ ನಡುವಿನ ಏಕಾಂಗಿತನ ಬಯಕೆ, ಸ್ವಚ್ಚಂದ ಸ್ವಾತಂತ್ರ ಬದುಕು ಕಟ್ಟಿಕೊಳ್ಳುವ ಕಲ್ಪನೆ ಇಂತಹ ಅವಘಡಗಳಿಗೆ ಹೆಚ್ಚು ಸ್ಪೂರ್ತಿದಾಯಕವಾಗಿದೆ ಎಂದು ಹೇಳುವುದನ್ನು ಕೇಳಿದ್ದೇವಲ್ಲವೇ?
ಸಮಾಜದ ಬಹುತೇಕ ಹಿರಿಯರು, ಸಮಾಜದ ಗೌರವಾನ್ವಿತ ಸ್ಥಿತಿಯಲ್ಲಿರುವವರು ಇಂತಹ ಸಮಸ್ಸೆಯನ್ನು ಬಗೆಹರಿಸುವುದನ್ನ ನಿರಂತರವಾಗಿ ನೋಡುತ್ತಿದ್ದೇವಲ್ಲವೇ? ಆದರೆ, ಗಂಡ, ಹೆಂಡಿರ ಮದ್ಯ ಹುಳಿಹಿಂಡೋರಿಂದ ಸಾಕಷ್ಟು ಕುಟುಂಬಗಳು ನೆಮ್ಮದಿಯನ್ಮೇ ಕಳೆದುಕೊಂಡಿವೆ. ಉಪದೇಶದ ನೆಪದಲ್ಲಿ ತಮ್ಮ ಮೂಗಿನ ನೇರಕ್ಕೆ ಮಾತಾಡಿ, ಸ್ವಾರ್ಥ ಸಾಧನೆ ಮಾಡಿಕೊಳ್ಳುವವರದೂ ಒಂದ್ ಬದುಕಾ? ಎಂಬುದೇ ಈ ವಾರದ ನೆಗಿಟೀವ್ ಥಿಂಕಿಂಗ್ ಅಂಕಣದ ವಿಷಯ.

ಪರಸ್ಪರ ಹೊಂದಾಣಿಕೆ ಬದುಕು ಕಟ್ಟಿಕೊಳ್ಳುವ ತುಡಿತ ಎಲ್ಲರಲ್ಲೂ ಇದ್ದರೂ ಕೆಲ ವ್ಯಂಗ್ಯ ಮುಖವಾಣಿಗಳು ಮದ್ಯಪ್ರವೇಶಿಸಿ ಇಲ್ಲದ್ದನ್ನೆಲ್ಲಾ ತಲೆಗೆ ತುಂಬಿ ಮನೆಯ, ಮನದ ನೆಮ್ಮದಿಗೆ ಕೊಡಲಿ ಏಟಿ ಹಾಕುತ್ತಾರೆ. ಇಂತಹವರಿಂದ ಬದುಕು, ಜೀವನವೇ ನಿಜಕ್ಕೂ ಸ್ಮಶಾನದಂತಾಗುತ್ತದೆ.
ಇಂದಿನ ದಿನಮಾನಗಳಲ್ಲಿ ಸಂಸಾರ ನಡೆಸುವುದು ಅಷ್ಟೊಂದು ಸುಲಭವೇನಲ್ಲ. ಹಿಂದೆ ಹತ್ತು ರೂಪಾಯಿ ದಿನದ ಕೂಲಿಯಲ್ಲಿ ಎಷ್ಟೋ ಜನ ಅತ್ಯಂತ ಖುಷಿಯಿಂದ ಆನಂದದಿಂದ ಬದುಕು ಕಟ್ಟಿಕೊಂಡಿರುವ ನಿದರ್ಶನಗಳನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಈಗ ರೊಕ್ಕದ ಬದುಕು ಹಾಗೂ ಹೆಚ್ಚುವರಿ ಆದ ನಮ್ಮ ಬದುಕಿನ ಮಿತಿ ಇಲ್ಲದ ಅಭಿಲಾಷೆಗಳು ಹಾಗೂ ಅವಶ್ಯಕತೆಗಳು ನಮ್ಮನ್ನು ನಿಜಕ್ಕೂ ಸಾಕು ಎನ್ನುವಂತಹ ಮಟ್ಟ ಮುಟ್ಟದಂತೆ ಮಾಡಿರುವುದು ದುರಂತವೇ ಹೌದು. ಎಷ್ಟಿದ್ದರೂ ಇನ್ನೂ ಬೇಕು ಎನ್ನುವ ಮನೋಭಾವ ನಮ್ಮ ನಡುವೆ ಹೆಚ್ಚಾಗಿರುವುದು ಈ ದಾಂಪತ್ಯದ ನಡುವಿನ ಬಿರುಕಿಗೆ ಒಂದು ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ ಎಂಬುದು ಹಲವರ ಅಭಿಪ್ರಾಯ.

ಬದುಕು ಕಟ್ಟಿಕೊಳ್ಳುವ ಆರಂಭದಲ್ಲಿ ಒಂದಿಷ್ಟು ಕಿರಿಕಿರಿಗಳು, ಒಂದಿಷ್ಟು ಹೊಂದಾಣಿಕೆ ವೈಫಲ್ಯಗಳು ಕಂಡುಬರುವುದು ಸಹಜ, ಕಟ್ಟಿಕೊಂಡ ಇಷ್ಟಪಟ್ಟ ಬದುಕು ನೆಮ್ಮದಿಯ ನೆಲೆಯಲ್ಲಿರುವಾಗ ಕೆಲ ಕಿರಾತಕ ಮನಸುಗಳು ಅದಕ್ಕೆ ಹುಳಿ ಹಿಂಡುವ ಮೂಲಕ ಹೊಂದಾಣಿಕೆಯ ಬದುಕಿನ ದಾಂಪತ್ಯದಲ್ಲಿ ಬೆಂಕಿ ಇಟ್ಟು ಚಳಿ ಕಾಯಿಸಿಕೊಳ್ಳುವ ವರ್ತನೆಗಳು ಇಡೀ ಸಮಾಜದ ವ್ಯವಸ್ಥೆಯನ್ನು ನಮ್ಮ ನಡುವಿನ ಕೌಟುಂಬಿಕ ವ್ಯವಸ್ಥೆಗಳನ್ನು ನಿಜಕ್ಕೂ ಹಾಳು ಮಾಡುತ್ತಿವೆ, ಮಾಡಿವೆ ಎಂದರೆ ತಪ್ಪಾಗಲಿಕ್ಕಿಲ್ಲ ಅಲ್ಲವೇ?
ಮತ್ತೊಂದು ದುರಂತವೆಂದರೆ ಮೊದಲು ಕೈತುತ್ತಿನಲ್ಲಿ ಸಿಕ್ಕದ್ದನ್ನು ಭಗವಂತ ಕೊಟ್ಟ ಎಂದು ನಂಬುತ್ತಿದ್ದ ಮನೋಸ್ಥಿತಿ ಈಗ ವಯಸ್ಸಾದಂತೆ ಹಣ ಆಸ್ತಿ ಎಂಬ ವ್ಯಾಮೋಹದಡೆ ತಿರುಗಿ ತನ್ನಷ್ಟಕ್ಕೆ ತಾನು ಎಂಬಂತೆ ಏಕಾಂಗಿತನವನ್ನು ಹುಡುಕುವ ಹಂಬಲಿಸುವ ಕ್ಷಣಗಳು ನಿರ್ಮಾಣವಾಗುತ್ತಿರುವುದು ದುರಂತವೇ ಹೌದು. ವಯಸ್ಸಾದಂತೆ ನಮ್ಮ ದುಡಿಮೆ ಹಣದ ವ್ಯಾಮೋಹವೇ ನೆಮ್ಮದಿಯನ್ನೇ ನುಂಗುತ್ತಿದೆಯಲ್ಲವೇ?

ಏಕಾಂತದ ಬದುಕು ಎಷ್ಟು ದಿನ ಸಾದ್ಯ.,ಕಟ್ಟಿಕೊಂಡ ಬದುಕು ನಮ್ಮ ನಮ್ಮ ಅಂತ್ಯದವರೆಗೂ ಇರಬೇಕೆಂಬ ಬಹುತೇಕರ ಕನಸು ಈಡೇರಲಿ. ಕ್ಷಣ ಮಾತ್ರದ ನಿರ್ಧಾರ ಎಲ್ಲವನ್ನೂ ಸರಿಪಡಿಸೊಲ್ಲ, ಸರಿಯಾಗಿಡೊಲ್ಲ, ಮನದಲ್ಲಿನ ಮೌನದ ಈ ಪ್ರಶ್ನೆಗೆ ನಾವೇ ಉತ್ತರ ಹುಡುಕಬೇಕಾಗಿದೆಯಲ್ಲವೇ?
ಬದುಕಲ್ಲಿ ಒಂದಿಷ್ಟು ಹಾಳು ಮಾಡಿ, ಜೂಜು, ಹೆಣ್ಣು, ಕುಡಿತ, ಅಕ್ರಮ ಸಂಬಂಧ ಎಂಬ ದುರಭ್ಯಾಸಗಳ ನಡುವೆ ಕಳೆಯುತ್ತಿದ್ದರೆ ಅದನ್ನು ತಪ್ಪು ಎನ್ನಬಹುದು. ಆದರೆ ದುಡಿದರೂ ಸಹ ಹಂಗಿಸುವ, ಹಿಯಾಳಿಸುವ ದಾಂಪತ್ಯದ ಕೆಲ ಮನಸ್ಥಿತಿಗಳು ಪರಸ್ಪರ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುವುದಲ್ಲದೆ, ಮಾನಸಿಕ ನೆಮ್ಮದಿ ಎಂಬುದನ್ನೇ ಶಾಶ್ವತವಾಗಿ ಚಿರ ನಿದ್ರೆಗೆ ಕಳುಹಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಲ್ಲವೇ?
ಒಟ್ಟಾರೆ ಎಲ್ಲರಿಗೂ ನೆಮ್ಮದಿಯ ಬದುಕು ಕಟ್ಟಿಕೊಳ್ಳುವ ಮನಸ್ಥಿತಿ, ಮನೋಭಾವ ಬೆಳೆಯಲಿ. ಇರುವುದರಲ್ಲಿ ಇತಿಮಿತಿಯೊಳಗಿನ ಬದುಕು, ನೆಮ್ಮದಿಯ ಮೇಲೆ ಪ್ರೀತಿ ವಿಶ್ವಾಸ ಮೇಳೈಸಲಿ ಎಂಬುದೇ ಈ ಅಂಕಣದ ಆಶಯ.
ಇದೊಂದು ಕವನ ಓದಿ
ಏಕಾಂಗಿ ಬದುಕು ಬೇಡ, ಆದರೆ, ಏಕಾಂಗಿಯಾಗಿ ಹೊರಡು, ಏನಾದರೂ ಸಿಕ್ಕುತ್ತೆ ಎಂಬ ಅದ್ಬುತ ಕವನದ ಸಾಲುಗಳು ನಮ್ಮ ಅಂಕಣದೊಳಗೆ ಹಾಕಲಾಗಿದೆ. ಚಂದ ಮನ ಮುಟ್ಟುವ ಬರಹದ ಕವನವ ಓದಿ
- ಸಂ.
ಏಕಾಂಗಿಯಾಗಿ ಹೊರಡು
ಏಕಾಂಗಿಯಾಗಿ ಹೊರಡು, ಯಾರಾದರು ಸಿಕ್ಕಾರು |
ಏನನ್ನು ಬಯಸದೇ ಹೊರಡು, ಬೇಕಾದುದು ಸಿಕ್ಕೀತು |
ದಾರಿ ತೊರೆದು ನಡೆ, ಬಯಲು ದಕ್ಕೀತು |
ಗುರಿಯಿಲ್ಲದೆ ಹೊರಡು, ಅರಿವಿನ ಗುರುವು ಸಿಕ್ಕಾನು
ನದಿಯ ಜಾಡು ಹಿಡಿ, ಕಡಲಾಗಬಹುದು |
ಧರ್ಮದ ನೆರಳ ತೊರೆ, ಮಹಾಮನೆ ಕಂಡೀತು |
ಸಾವನ್ನು ಹುಡುಕಿ ನಡೆ, ಬದುಕು ಸಿಕ್ಕೀತು |
ನಿನ್ನ ವಿರುದ್ಧ ನೀನು ಹೋರಾಡು, ಗೆದ್ದರೆ ಸಂತನಾಗುವೆ ನೀ
ಸರಳ ರೇಖೆಯಾಗಿರು, ಬಾಳು ಹಗುರ ಆದೀತು |
ಸತ್ಯವ ಹುಡುಕದಿರು, ಕಂಡದ್ದು ಸುಳ್ಳಾದೀತು |
ಏಕತಾರಿಯ ಹಿಡಿ, ನಾದ ಲಯವೂ ಆದೀತು |
ಚಲನೆಗೆ ಸಾಕ್ಷಿಯಾಗು, ಶೂನ್ಯ ತಬ್ಬಿಕೊಂಡೀತು
ಎದೆಯ ದನಿಯ ನುಡಿ, ಹಾಡು ಬೆಡಗು ಆದೀತು |
ಖಾಲಿಯಾಗಿ ಹೊರಡು, ಜೋಳಿಗೆ ತುಂಬೀತು |
ತೆರೆದ ತೋಳಲ್ಲಿ ನಡೆ, ಬೊಗಸೆ ಪ್ರೀತಿ ದಕ್ಕೀತು |
ಎಲ್ಲವನೂ ಕಳಚಿಟ್ಟು ಹೊರಡು, ಉಡಲು ಬೆಳಕೇ ಸಿಕ್ಕೀತು
ಯಾರೂ ಒಂಟಿಯಲ್ಲ, ನೆರಳು ಹಿಂಬಾಲಿಸೆ ||
ನಡೆದಷ್ಟೂ ಹಾದಿ ಕಂಡಷ್ಟು ಬಯಲು ||
ಹೊರಡು ಈಗಲೇ ಹೊರಡು ||
ಗುಂಡಾದ ಭೂಮಿಯಲ್ಲಿ
ಎಂದಾದರು ಸಿಕ್ಕೇಸಿಗುತ್ತೇವೆ ||
ಮತ್ತೇ ಮತ್ತೇ ಸಿಕ್ಕೇ ಸಿಗುತ್ತೇವೆ
- ಹಂದಲಗೆರೆ ಗಿರೀಶ್