ಶಿವಮೊಗ್ಗ : ಜಮೀನು ಭೂಸ್ವಾಧೀನಪಡಿಸಿಕೊಂಡು ರೈತರೊಬ್ಬರಿಗೆ ಪರಿಹಾರ ನೀಡದೇ ಇರುವ ಕಾರಣಕ್ಕೆ ಜಿಲ್ಲಾಧಿಕಾರಿಗಳ ಕಾರನ್ನೇ ಜಪ್ತಿಮಾಡಲು ಹಿರಿಯ ಸಿವಿಲ್ ನ್ಯಾಯಾಲಯ ಆದೇಶ ನೀಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಡಿ.೫ರಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಉಸ್ತುವಾರಿ ಸಚಿವರ ಪರಿಶೀಲನಾ ಸಭೆ ಮತ್ತು ಸುದ್ದಿಗೋಷ್ಠಿ ನಡೆಯುತ್ತಿತ್ತು. ಅದೇ ಸಂದರ್ಭದಲ್ಲಿ ಕೋರ್ಟ್ ಅಮೀನರು ನ್ಯಾಯಾಲಯದ ಆದೇಶ ಪ್ರತಿ ಹಿಡಿದುಕೊಂಡು ಜಿಲ್ಲಾಧಿಕಾರಿಗಳ ಕಾರು ಜಪ್ತಿಗೆ ಬಂದಿದ್ದರು. ಸರ್ವೇ ನಂ.೧೦೧ರಲ್ಲಿ ಹರಮಘಟ್ಟದ ನಿವಾಸಿ ನಂದ್ಯಪ್ಪ ಎಂಬುವವರ ೧ಎಕರೆ ಜಮೀನನ್ನು ಆಶ್ರಯ ಬಡಾವಣೆ ನಿರ್ಮಾಣಕ್ಕೆ ಸರ್ಕಾರಕ್ಕೆ ವಶಪಡಿಸಿಕೊಂಡಿತ್ತು. ಅವರಿಗೆ ಆ ಸಂಬಂಧ ಪರಿಹಾರ ನೀಡಿರಲಿಲ್ಲ. ಆ ಜಮೀನಿನ ಖಾತೆ ನಂದ್ಯಪ್ಪ ಹೆಸರಿನಲ್ಲಿದ್ದು, ಅಧಿಕಾರಿಗಳ ಗಮನಕ್ಕೆ ತಂದಾಗ ನ್ಯಾಯಾಲಯದಲ್ಲಿ ಅವರಿಗೆ ೨೨,೬೦,೦೦೦ ರೂ. ಜಮೀನಿನ ಪರಿಹಾರ ನೀಡಲು ಆದೇಶಿಸಿತ್ತು. ಜಿಲ್ಲಾಡಳಿತ ಮೊದಲ ಹಂತದಲ್ಲಿ ೯ ಲಕ್ಷ ರೂ. ಪರಿಹಾರ ನೀಡಿ ಉಳಿದ ಹಣವನ್ನು ಬಾಕಿ ಇರಿಸಿಕೊಂಡಿತ್ತು. ಸುಮಾರು ೨೦ ವರ್ಷಗಳಿಂದ ನಂದ್ಯಪ್ಪ ಅವರು ರಾಜ್ಯದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿಗಳು ಮತ್ತು ಸಿಇಓ ಹಾಗೂ ಪಂಚಾಯತ್ ಅಧಿಕಾರಿಗಳಲ್ಲಿ ಅನೇಕ ಬಾರಿ ಮನವಿ ಮಾಡಿದ್ದರು. ಆದರೂ ಪರಿಹಾರ ಸಿಗದೇ ಇದ್ದಾಗ ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ೨ನೇ ಹಿರಿಯ ಸಿವಿಲ್ ನ್ಯಾಯಾಧೀಶರು, ೨೦೨೦ರಲ್ಲಿ ಆದೇಶ ನೀಡಿ ಬಡ್ಡಿ ಸಹಿತ ಒಟ್ಟು ರೂ. ೯೫,೮೮,೨೮೩ ರೂ. ಕೂಡಲೇ ಪರಿಹಾರ ಬಿಡುಗಡೆ ಮಾಡಲು ಆದೇಶ ನೀಡಿತ್ತು.

ನಂತರ ಕೂಡ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಪರಸ್ಪರ ನಂದ್ಯಪ್ಪ ಅವರನ್ನು ಪರಿಹಾರಕ್ಕೆ ಓಡಾಡಿಸಿತ್ತು. ಅನಿವಾರ್ಯವಾಗಿ ಮತ್ತೆ ನ್ಯಾಯಾಲಯದ ಮೊರೆ ಹೋದಾಗ ನ್ಯಾಯಾಲಯ ಜಿಲ್ಲಾಧಿಕಾರಿಗಳ ಕಾರನ್ನು ಜಪ್ತಿಮಾಡಲು ವಾರೆಂಟ್ ಹೊರಡಿಸಿತ್ತು. ಇಂದು ಕೋರ್ಟ್ ಅಮೀನರು ಜಿಲ್ಲಾಧಿಕಾರಿಗಳ ಕಾರನ್ನೇ ಜಪ್ತಿಮಾಡಲು ಬಂದ ಅಪರೂಪದ ಘಟನೆ ನಡೆಯಿತು. ಸಂತ್ರಸ್ತ ನಂದ್ಯಪ್ಪನವರು ಪರಿಹಾರಕ್ಕಾಗಿ ಈ ನ್ಯಾಯಾಲಯದ ಹೋರಾಟಕ್ಕಾಗಿ ನಾನು ನನ್ನ ಇನ್ನೊಂದು ಎಕರೆ ಜಮೀನನ್ನು ಕೂಡ ಕಳೆದುಕೊಳ್ಳಬೇಕಾಯಿತು. ನನಗೆ ವಯಸ್ಸಾಗಿದ್ದು, ಕಾಯಿಲೆಯಿಂದ ಬಳಲುತ್ತಿದ್ದು, ಬೆಂಗಳೂರು, ಶಿವಮೊಗ್ಗ ಮತ್ತು ನ್ಯಾಯಾಲಯಕ್ಕೆ ಓಡಾಡಿ ಸುಸ್ತಾಗಿದ್ದು, ಆದರೂ ಅಧಿಕಾರಿಗಳ ಕರುಣೆ

ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಅಂತಿಮವಾಗಿ ಜಿಲ್ಲಾಧಿಕಾರಿಗಳು ನ್ಯಾಯಾಲಯಕ್ಕೆ ಮತ್ತೊಮ್ಮೆ ಪರಿಹಾರ ವಿತರಣೆಗೆ ಗಡುವು ಮುಂದುವರಿಸುವಂತೆ ಪತ್ರನೀಡಿ, ನಂದ್ಯಪ್ಪ ಅವರನ್ನು ಸಾಗುಹಾಕಿದ ಘಟನೆಯೂ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ಈ ಅಪರೂಪದ ಘಟನೆಗೆ ಆಕ್ರೋಶ ವ್ಯಕ್ತವಾಗಿದೆ.