ಶಿವಮೊಗ್ಗ : ನಗರದಲ್ಲಿ ಸುಗಮ ಸಂಚಾರಕ್ಕೆ ಸಂಚಾರಿ ಪೊಲೀಸ್ವತಿಯಿಂದ ವ್ಯಾಪಕ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಇತ್ತೀಚೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಅಡ್ಡಾದಿಡ್ಡಿ ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳ ನಿಲುಗಡೆಯಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ಹಿನ್ನಲೆಯಲ್ಲಿ ಖುದ್ಧಾಗಿ ಜಿಲ್ಲಾ ರಕ್ಷಣಾಧಿಕಾರಿಗಳು ವರ್ತಕರ ಸಭೆ ಕರೆದು ಕುಂದು-ಕೊರತೆಗಳನ್ನು ಆಲಿಸಿ, ಅವರಿಂದ ಸಲಹೆ ಪಡೆದಿದ್ದರು. ನಂತರ ಸಂಚಾರಿ ಪೊಲೀಸ್ ಅಧಿಕಾರಿಗಳ ಸಭೆ ಕರೆದು ಹಲವು ಬಾರಿ ಚರ್ಚೆ ನಡೆಸಿ, ಸ್ಥಳ ಪರಿಶೀಲನೆಯನ್ನು ಕೂಡ ಮಾಡಿ, ಇದೀಗ ಜಿಲ್ಲಾ ರಕ್ಷಣಾಧಿಕಾರಿಗಳ ಮಾರ್ಗದರ್ಶನ ಮತ್ತು ಉತ್ಸಾಹಿ ಸಂಚಾರಿ ಪೊಲೀಸ್ ನಿರೀಕ್ಷಕ ದೇವರಾಜ್ ಅವರ ನೇತೃತ್ವದಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪ್ರಥಮವಾಗಿ ಕಳೆದ ಕೆಲವು ವರ್ಷಗಳಿಂದ ಗಾಂಧಿಬಜಾರ್ನಲ್ಲಿ ಬೀದಿಬದಿ ವ್ಯಾಪಾರಸ್ಥರು ಮತ್ತು ತಳ್ಳುವ ಗಾಡಿಗಳಿಂದ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗಿತ್ತು ಅವರ ಸಭೆ ಕರೆದು ಅವರಿಗೆ ತಿಳಿಹೇಳಿ ಒಂದಿಷ್ಟು ನಿರ್ಧಿಷ್ಟ ಸ್ಥಳಗಳಲ್ಲಿ ಅವಕಾಶಕೊಟ್ಟು ಗಾಂಧಿಬಜಾರ್ನ ಎರಡನೇ ಕ್ರಾಸ್ನಲ್ಲಿ ಸ್ವತಃ ಪೊಲೀಸರೇ ಬಿಳಿಲೈನನ್ನು ಹಾಕಿ, ವ್ಯಾಪಾರಸ್ಥರು ಆ ಲೈನಿನ ಹೊರಗೆ ಬರದಹಾಗೆ ಕಠಿಣ ಎಚ್ಚರಿಕೆ ನೀಡಿದ ಬಳಿಕ ಅಲ್ಲೊಂದಿಷ್ಟು ಸುಧಾರಣೆಯಾಗಿದೆ. ನಂತರ ಉಷಾ ಸರ್ಕಲ್(ಅಕ್ಕ ಮಹಾದೇವಿ ವೃತ್ತ)ನಲ್ಲಿ ಸಿಗ್ನಲ್ ಇಲ್ಲದೆ ಬಹಳಷ್ಟು ಅವಾಂತರಗಳಿಗೆ ಕಾರಣವಾಗಿತ್ತು. ಈಗ ಅಲ್ಲಿ ಸಂಚಾರಿ ಸೋಲಾರ್ ಸಿಗ್ನಲ್ ಅಳವಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಕೆಎಸ್ಆರ್ಟಿಸಿ ಬಸ್ಸುಗಳು ಅನಗತ್ಯವಾಗಿ ನಗರ ಮಧ್ಯದಲ್ಲಿ ಓಡಾಡುತ್ತಿರುವುದನ್ನು ಡೈವರ್ಟ್ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ರೈಲ್ವೆನಿಲ್ದಾಣದಲ್ಲಿ ಸಾರ್ವಜನಿಕರಿಗೆ ಆಟೋಚಾಲಕರ ಹಾವಳಿ ತಡೆಯಲಾಗುತ್ತಿರಲಿಲ್ಲ. ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದರು. ಈಗ ಫ್ರೀಪೇಯ್ಡ್ ಆಟೋ ನಿಲ್ದಾಣ ಮಾಡಿದ ಬಳಿಕ ಅದು ಕೂಡ ಯಶಸ್ವಿಯಾಗಿ ನಡೆಯುತ್ತಿದೆ.

ಗೋಪಿಸರ್ಕಲ್ನಲ್ಲಿ ಕಸ್ತೂರ ಬಾ ಕಾಲೇಜು ರಸ್ತೆಗೆ ಹೋಗುವಲ್ಲಿ ಸಿಗ್ನಲ್ ಇಲ್ಲದೆ ಅವ್ಯವಸ್ಥೆಯಾಗಿತ್ತು. ಈಗ ಅಲ್ಲಿ ಕೂಡ ಸಿಗ್ನಲ್ ಅಳವಡಿಸಲಾಗಿದೆ. ಬಾಲರಾಜ್ ರಸ್ತೆಯಿಂದ ಗೋಪಿಸರ್ಕಲ್ಗೆ ಸಂಪರ್ಕಿಸುವಲ್ಲಿ ಡಿವೈಡರ್ ವಿಸ್ತಾರ ಕಡಿಮೆ ಮಾಡಿದಲ್ಲಿ ಅಲ್ಲಿ ಇನ್ನೊಂದಿಷ್ಟು ಅನುಕೂಲವಾಗಲಿದೆ. ನೆಹರೂ ರಸ್ತೆ, ಪಾರ್ಕ್ ಎಕ್ಸ್ಟೆನ್ಷನ್, ಎಲ್ಎಲ್ಆರ್ ರಸ್ತೆ, ಜೆಪಿಎನ್ ರಸ್ತೆ, ದುರ್ಗಿಗುಡಿ ಸುತ್ತಮುತ್ತಲು ಸುಮಾರು ೨೪ ಕನ್ಸರ್ವೆನ್ಸಿಗಳಿದ್ದು ಪಾಲಿಕೆವತಿಯಿಂದ ಹಂತ ಹಂತಗಳಲ್ಲಿ ಎಂಟು ಕೋಟಿ ರೂ. ವೆಚ್ಚದಲ್ಲಿ ವಿವಿಧ ಯೋಜನೆಗಳಡಿ ಅಭಿವೃದ್ಧಿಗೊಳಿಸಲಾಗಿತ್ತು. ನಂತರ ಸ್ಮಾರ್ಟ್ಸಿಟಿಯಿಂದ ಶೌಚಾಲಯಗಳನ್ನು ನಿರ್ಮಿಸಲಾಗಿತ್ತು. ಆದರೆ ಇಚ್ಛಾಶಕ್ತಿಯ ಕೊರತೆಯಿಂದ ಹಲವು ವರ್ಷ ಕಳೆದರೂ ಅದು ಉಪಯೋಗಕ್ಕೆ ಬಾರದೆ ಅನೈತಿಕ ಚಟುವಟಿಕೆಗಳ ತಾಣವಾಗಿತ್ತು. ಮತ್ತು ಖಾಸಗಿಯವರು ಅತಿಕ್ರಮಣ ಮಾಡಿದ್ದರು. ಕೆಲವೆಡೆ ಶುಲ್ಕಸಹಿತ ಪಾರ್ಕಿಂಗ್ ವ್ಯವಸ್ಥೆ ಮಾಡಿದಾಗ ಅದು ಯಶಸ್ವಿಯಾಗಿರಲಿಲ್ಲ. ಈಗ ಮತ್ತೆ ಟ್ರಾಫಿಕ್ ಪೊಲೀಸ್, ಜಿಲ್ಲಾಡಳಿತ ಮತ್ತು ಪಾಲಿಕೆ ಅಧಿಕಾರಿಗಳು ಸಭೆಸೇರಿ ಕಠಿಣ ಕ್ರಮ ಕೈಗೊಂಡಿದ್ದು ನಗರದ ಪ್ರಮುಖ ಆಸ್ಪತ್ರೆಗಳು ತಮ್ಮ ಬಹುಮಹಡಿ ಕಟ್ಟಡಕ್ಕೆ ನಿಯಮ ಪ್ರಕಾರ ಪಾರ್ಕಿಂಗ್ ಸ್ಥಳ ಬಿಡದೇ ಇದ್ದ ಕಾರಣ ನಂಜಪ್ಪ ಆಸ್ಪತ್ರೆಯ ಡೌನ್ ರಸ್ತೆಯಿಂದ ಮಥುರಾ ಹೋಟೆಲ್ನವರೆಗೆ ಸಾರ್ವಜನಿಕರು ಓಡಾಡುವುದೇ ಕಷ್ಟವಾಗಿತ್ತು. ಈಗ ಕನ್ಸರ್ವೆನ್ಸಿಯನ್ನು ಅಭಿವೃದ್ಧಿಪಡಿಸಿ ಅಲ್ಲಿ ಭದ್ರತೆ ಒದಗಿಸಿ, ಸಿಸಿ ಕ್ಯಾಮೇರಾ ಹಾಕಿಸಿ ದ್ವಿಚಕ್ರ ವಾಹನಗಳ ನಿಲುಗಡೆಗೆ ಕ್ರಮ ಕೈಗೊಳ್ಳಲಾಗಿದೆ.
ಎಲ್ಲಾ ವರ್ತಕರು ಮತ್ತು ಆಸ್ಪತ್ರೆಯ ಮಾಲೀಕರು ತಮ್ಮ ಸಿಬ್ಬಂದಿಗಳ ವಾಹನಗಳನ್ನಾದರೂ ಕನ್ಸರ್ವೆನ್ಸಿಯಲ್ಲಿ ನಿಲ್ಲಿಸಿದರೆ ಸಾವಿರಕ್ಕೂ ಹೆಚ್ಚು ದ್ವಿಚಕ್ರವಾಹನಗಳು ಈ ಐದು ರಸ್ತೆಗಳಲ್ಲಿ ನಿಲುಗಡೆ ಸಮಸ್ಯೆಯಿಂದ ಮುಕ್ತಿ ಸಿಗಲಿದೆ. ಕೆಲವು ಸಂಸ್ಥೆಗಳು ತಮ್ಮದೇ ವೆಚ್ಚದಲ್ಲಿ ಇದರ ನಿರ್ವಹಣೆಗೂ ಒಪ್ಪಿದ್ದಾರೆ. ಒಟ್ಟಿನಲ್ಲಿ ಕನ್ಸರ್ವೆನ್ಸಿಯಲ್ಲಿ ವಾಹನ ನಿಲುಗಡೆ ಮಾಡುವುದರಿಂದ ನಗರದ ವಾಹನ ನಿಲುಗಡೆ ದಟ್ಟಣೆಯನ್ನು ಕಡಿಮೆಮಾಡಿ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ.
ಈಗಾಗಲೇ ಪೊಲೀಸ್ ಇಲಾಖೆ, ಮೆಸ್ಕಾಂ ಹಾಗೂ ಪಾಲಿಕೆ ನೆರವಿನೊಂದಿಗೆ ಅನಾವಶ್ಯಕ ಕಂಬಗಳನ್ನು ತೆರವುಗೊಳಿಸುವ ಕಾರ್ಯ ಮಾಡುತ್ತಿದೆ. ಸಂಚಾರಿ ಪೊಲೀಸ್ ನಿರೀಕ್ಷಕರಂತೂ ತಮ್ಮ ಶಕ್ತಿಮೀರಿ ತಮ್ಮ ತಂಡದೊಂದಿಗೆ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳುತ್ತಿದ್ದಾರೆ.
ಇತ್ತೀಚೆಗೆ ಆರ್ಟಿಓ, ಜಿಲ್ಲಾ ಪೊಲೀಸ್, ಸಂಚಾರಿ ಪೊಲೀಸ್, ಕಾನೂನು ಸೇವಾ ಪ್ರಾಧಿಕಾರದ ಸಭೆಯಲ್ಲಿ ನ್ಯಾಯಾಧೀಶರಾದ ಸಂತೋಷ್ಕುಮಾರ್, ಸಾರ್ವಜನಿಕರಿಗೆ ಮನವಿ ಮಾಡಿದ್ದರು. ಡಿ.೧೨ರ ವರೆಗೆ ಸಂಚಾರಿ ನಿಯಮಗಳ ಉಲ್ಲಂಘನೆಯ ದಂಡದಲ್ಲಿ ಸರ್ಕಾರದ ಆದೇಶದಂತೆ ಶೇ.೫೦ರ ರಿಯಾಯಿತಿ ಇದ್ದು ಸಾರ್ವಜನಿಕರು ಇದರ ಲಾಭ ಪಡೆಯುವಂತೆ ಮನವಿ ಮಾಡಿದ್ದರು. ಈ ದೇಶದ ಪ್ರಜ್ಞಾವಂತ ನಾಗರೀಕರಾಗಿ ಸಾರ್ವಜನಿಕರ ಕರ್ತವ್ಯವೂ ಇದೆ. ಕಾನೂನು ಪಾಲನೆ ಮಾಡುವುದು ನಿಯಮಗಳನ್ನು ಪಾಲಿಸುವುದು ಎಲ್ಲರ ಕರ್ತವ್ಯವಾಗಿದ್ದು, ದಂಡವನ್ನು ತಪ್ಪಿಸಲು ಹಾಗೂ ಅಪಘಾತ ತಡೆಯಲು ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಅತೀ ಅವಶ್ಯಕವಾಗಿದ್ದು ಸಂಚಾರಿ ಪೊಲೀಸರ ಜೊತೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಸಂಚಾರಿ ನಿರೀಕ್ಷಕ ದೇವರಾಜ್ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.