ಶಿವಮೊಗ್ಗ : ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಕದನ ಶಮನಕ್ಕಾಗಿ ಸದ್ಯಕ್ಕೆ ಒಂದು ‘ಸ್ಟಂಟ್’ ಹಾಕಿಸಿಕೊಳ್ಳುವ ಕೆಲಸ ಮಾಡಲಾಗುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ರಾಜ್ಯದ ಸದ್ಯದ ವಿದ್ಯಮಾನವನ್ನು ಟೀಕಿಸಿದರು. ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಇಂದಿನ ಸಿಎಂ-ಡಿಸಿಎಂ ಅವರ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಬರುವ ವಿಧಾನಸಭಾ ಅಧಿವೇಶನ ಮುಗಿಯುವವರೆಗೆ ಈ ಸರ್ಕಾರ ಇರಲೆಂದು ಸಧ್ಯಕ್ಕೆ ತಾತ್ಕಾಲಿಕ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಅಧಿವೇಶನದ ನಂತರ ಕಾಂಗ್ರೆಸ್ ಸರ್ಕಾರಕ್ಕೆ ಮೇಜರ್ ಆಪರೇಷನ್ ನಡೆಯಲಿದೆ ಎಂದು ಕಟುಕಿಯಾಡಿದರು.

ಸಿಎಂ-ಡಿಸಿಎಂ ತಮ್ಮ ಪತ್ರಿಕಾಗೋಷ್ಠಿಯಲ್ಲಿ ತಮ್ಮ ತಪ್ಪಿಗಾಗಿ ಮಾಧ್ಯಮ ಹಾಗೂ ವಿರೋಧ ಪಕ್ಷದವರನ್ನು ಮೂದಲಿಸುತ್ತಿದ್ದಾರೆ. ಈ ಸರ್ಕಾರಕ್ಕೆ ರೈತರ ಬಗ್ಗೆ ಎಳ್ಳಷ್ಟೂ ಕಾಳಜಿಯಿಲ್ಲ. ಕಳೆದ ಎರಡೂವರೆ ವರ್ಷಗಳಿಂದ ಕೇವಲ ಬೂಟಾಟಿಕೆ ಮಾಡಿ ದಿನ ದೂಡುತ್ತಿದ್ದಾರೆ. ರೈತರ ಕಬ್ಬಿನ ಸಮಸ್ಯೆ ಬಗ್ಗೆ ಈಗಾಗಲೆ ರಾಜ್ಯದ ಜನರಿಗೆ ಗೊತ್ತಾಗಿದೆ. ಈಗಾಗಲೇ ಮೆಕ್ಕೆಜೋಳದ ಕಟಾವು ಆರಂಭವಾಗಿದೆ. ಸರ್ಕಾರಕ್ಕೆ ಖರೀದಿ ಕೇಂದ್ರ ತೆರೆಯಲಾಗಲಿಲ್ಲ. ಎಲ್ಲವನ್ನು ಕೇಂದ್ರದ ಮೇಲೆ ಹಾಕಿ ಇವರು ನುಣುಚಿಕೊಳ್ಳುತ್ತಿದ್ದಾರೆ. ಇದು ಕರ್ನಾಟಕ ಜನರ ದೌರ್ಭಾಗ್ಯ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಕೇಂದ್ರ ಕಬ್ಬಿಣ ಮತ್ತು ಅದಿರು ಸಚಿವ ಹೆಚ್.ಡಿ. ಕುಮಾರಸ್ವಾಮಿ, ಭದ್ರಾವತಿ-ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು, ವಿಐಎಸ್ಎಲ್ ಸಂಸ್ಥೆಗೆ ಪುನರ್ಜೀವ ಕೊಡಲು ಮುಂದಾಗಿದ್ದಾರೆ. ಜನತೆಗೆ ಒಂದು ಸಿಹಿಸುದ್ದಿ ಲಭಿಸಿದೆ ಎಂದರು.