ಶಿವಮೊಗ್ಗ : ಜಿಲ್ಲಾಧಿಕಾರಿಗಳ ಅನುಮತಿ ಇಲ್ಲದೆ ರೈತರಿಗೆ ನೋಟಿಸ್ ಕೊಡಕೂಡದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅರಣ್ಯ ಇಲಾಖೆ ವೃತ್ತ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅವರು ಇಂದು ಜಿಲ್ಲಾ ಪಂಚಾಯತ ಅಬ್ದುಲ್ ನಜೀರ್ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆ.ಡಿ.ಪಿ.ಸಭೆಯಲ್ಲಿ ಶಾಸಕಿ ಶಾರದಾ ಪೂರ್ಯಾನಾಯ್ಕ್, ಅತಿಕ್ರಮಣದ ನೆಪದಲ್ಲಿ ರೈತರಿಗೆ ನೋಟಿಸ್ ನೀಡುವುದು, ಒಕ್ಕಲೆಬ್ಬಿಸುವುದನ್ನು ಮಾಡಲಾಗುತ್ತಿದೆ. ಅದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಅವರ ಮಾತಿಗೆ ಧ್ವನಿಗೂಡಿಸಿದ ಶಾಸಕ ಆರಗ ಜ್ಞಾನೇಂದ್ರ, ಊರು ಊರನ್ನೂ ಅರಣ್ಯ ಇಲಾಖೆಯವರು ಡೀಮ್ಡ್ ಫಾರೆಸ್ಟ್ ಮಾಡುತ್ತಿದ್ದಾರೆ. ತಲ ತಲಾಂತರದಿಂದ ಸಾಗುವಳಿ ಮಾಡುತ್ತಿರುವ ರೈತರಿಗೂ ಕಿರುಕುಳ ನೀಡುತ್ತಿದ್ದಾರೆ ಎಂದು ಏರಿದ ಧ್ವನಿಯಲ್ಲಿ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಾಗ ಮಧ್ಯ ಪ್ರವೇಶಿಸಿದ ಸಚಿವ ಮಧು ಬಂಗಾರಪ್ಪ, ಮುಂದಿನವಾರ ಈ ಕುರಿತು ಸಚಿವ ಕೆ.ಜೆ.ಜಾರ್ಜ್ ಅವರ ಜೊತೆ ಸಭೆ ನಡೆಸುತ್ತೇನೆ. ಒಂದು ಸ್ಪಷ್ಟನೆ ತೆಗೆದುಕೊಳ್ಳುತ್ತೇನೆ. ಕೋರ್ಟ್ ಪ್ರಕರಣ ಹೊರತು ಪಡಿಸಿ ಯಾರಿಗೂ ನೋಟಿಸ್ ಕೊಡಬೇಡಿ ಎಂದು ಪುನರುಚ್ಛರಿಸಿದರು.
ನೀವು ಸಚಿವ ಜಾಜ್ ್ ಜತೆ ಸಭೆ ಮಾಡ್ತೀರಿ. ನಮ್ಮನ್ನು ಕರೆಯದೆ ನೀವು ಪಕ್ಷ ಬೇಧ ಮಾಡ್ತೀರಾ. ನಮ್ಮನ್ನೂ ಆ ಸಭೆಗೆ ಕರೆಯಿರಿ ಎಂದು ಸಚಿವರ ಕಾಲೆಳೆದರಲ್ಲದೆ ನೋಟಿಸ್ ನೀಡುವ ಎಸಿ, ವಿ.ಎ., ಆರ್.ಐ. ಆರ್.ಎಫ್.ಒ. ವಿರುದ್ಧ ಪ್ರಕರಣ ದಾಖಲು ಮಾಡಿ ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ತಾಲೂಕಾವಾರು ಡೀಮ್ಡ್ ಫಾರೆಸ್ಟ್ ಕುರಿತು ಸಮೀಕ್ಷೆ ನಡೆಸಿ ಮುಂದಿನ ಕೆಡಿಪಿ ಸಭೆಯೊಳಗೆ ಅಂಥಹ ರೈತರ ಕೈಬಿಡುವ ಭರವಸೆ ನೀಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಬೇಳೂರು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಕುರಿತು ಪ್ರಸ್ತಾಪಿಸಿ ತಮ್ಮ ಕ್ಷೇತ್ರದ ನಿಟ್ಟೂರು, ಬ್ಯಾಕೋಡು ಮೊದಲಾದ ಭಾಗಗಳಲ್ಲಿ ಕಳೆದ ಹಲವಾರು ದಿನಗಳಿಂದ ಆರೋಗ್ಯಸೇವೆ ಸ್ಥಗಿತಗೊಂಡಿದೆ. ಇದನ್ನು ತಕ್ಷಣ ಬಗೆಹರಿಸಬೇಕು ಎಂದಾಗ ಅದಕ್ಕೆ ಧ್ವನಿಗೂಡಿಸಿದ ಶಾಸಕ ಆರಗ ಜ್ಞಾನೇಂದ್ರ ಕೂಡ ತೀರ್ಥಹಳ್ಳಿ ಕ್ಷೇತ್ರದಲ್ಲಿಯೂ ಇದೇ ಪರಿಸ್ಥಿತಿ ಇದೆ. ವೈದ್ಯರು ಮತ್ತು ಸಿಬ್ಬಂದಿಗಳಿಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ. ಪಿಎಫ್, ಇಎಸ್ಐ ಸೌಲಭ್ಯವೂ ಇಲ್ಲ. ಹೊರಗುತ್ತಿಗೆಯವರು ಈ ಹಣವನ್ನು ತಿಂದು ಹಾಕುತ್ತಿದ್ದಾರೆ. ಅವರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು. ಸಚಿವ ಮಧುಬಂಗಾರಪ್ಪ ಕೂಡ ಸೊರಬ ಕ್ಷೇತ್ರದಲ್ಲಿಯೂ ಇದೇ ಪರಿಸ್ಥಿತಿ ಇದೆ ಎಂದು ಸಭೆಯ ಗಮನಕ್ಕೆ ತಂದಿದ್ದು ಎಲ್ಲರ ಹುಬ್ಬೇರಿಸಿತ್ತು.
ಕಾಡಾನೆ ದಾಳಿಯ ಬಗ್ಗೆ ಕೂಡ ಸಭೆಯಲ್ಲಿ ಪ್ರತಿಧ್ವನಿಸಿದ್ದು ಇತ್ತೀಚೆಗೆ ಅರಸಾಳು ಮತ್ತಿತರ ಕಡೆಗಳಲ್ಲಿ ಕಾಡಾನೆ ಹಾವಳಿಯಿಂದ ರೈತರ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಅರಣ್ಯ ವಲಯಾಧಿಕಾರಿಗಳನ್ನು ಕೇಳಿದರೆ ಇನ್ನೊಂದು ವಲಯದ ಮೇಲೆ ಜವಾಬ್ದಾರಿ ಹೋರಿಸುತ್ತಾರೆ. ಚಿಕ್ಕಮಗಳೂರು, ಶಿವಮೊಗ ಅರಣ್ಯ ಅಧಿಕಾರಿಗಳ ಸಭೆ ಕರೆದ ಆನೆ ದಾಳಿ ಹತೋಟಿಗೆ ಕ್ರಮಕೈಗೊಳ್ಳಬೇಕು ಎಂದರು. ಇದಕ್ಕೆ ಶಾಸಕಿ ಶಾರದಾ ಪೂರ್ಯಾನಾಯಕ್ ಧ್ವನಿಗೂಡಿಸಿ ಮಲೆಶಂಕರ-ನಂದಿಕೋಲು ಪ್ರದೇಶದಲ್ಲಿಯೂ ನಿರಂತರ ಕಳೆದ ಎರಡೂವರೆ ವರ್ಷಗಳಿಂದ ಆನೆ ದಾಳಿ ನಡೆಯುತ್ತಿದ್ದರೂ ಅದರ ತಡೆಗೆ ಯಾವುದೇ ಕ್ರಮವಾಗಿಲ್ಲ ಎಂದಾಗ ಅರಣ್ಯ ಇಲಾಖೆಯ ಅಧಿಕಾರಿ ಹನುಮಂತಪ್ಪ, ಈಗಾಗಲೇ ಆ ಪ್ರದೇಶದಲ್ಲಿ ಎಂಟು ಕಿ.ಮೀ. ಉದ್ದದ ಆನೆತಡೆ ಟ್ರಂಚಿಗೆ ಟೆಂಡರ್ ಕರೆಯಲಾಗಿದೆ ಎಂದರು. ತರಬೇತಿ ಹೊಂದಿದ ಸಿಬ್ಬಂದಿಗಳನ್ನೇ ಆನೆ ದಾಳಿ ತಡೆಯಲು ನಿಯುಕ್ತಿ ಮಾಡುವುದಾಗಿ ಸಚಿವ ಮಧುಬಂಗಾರಪ್ಪ ತಿಳಿಸಿದರು.
ಶಿವಮೊಗ್ಗದಲ್ಲಿ ನಡೆಯುತ್ತಿರುವ ಗಾಂಜಾ ಹಾವಳಿಗೆ ಸಂಬಂಧಿಸಿದಂತೆ ಈ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯಿತು. ಮನೆ ಮನೆಯಲ್ಲಿ ಮದ್ಯ, ಗಾಂಜಾ ಮಾರಾಟವಾಗುತ್ತಿದೆ. ಸರ್ಕಾರ ಇದರ ವಿರುದ್ಧ ಏನೂ ಕ್ರಮಕೈಗೊಳ್ಳುತ್ತಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಮತ್ತು ಎಸ್.ಎನ್. ಚನ್ನಬಸಪ್ಪ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಾಗ ಇದಕ್ಕೆ ಎಲ್ಲರ ಬೆಂಬಲ ಅಗತ್ಯ. ಗಾಂಜಾ ಹಾವಳಿ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲು ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದರು.
ಶಿವಮೊಗ್ಗ ನಗರದ ಕೃಷಿನಗರ, ಬಸವನಗುಡಿ, ಆರ್ಎಂಎಲ್ ನಗರ, ಲಷ್ಕರ್ಮೊಹಲ್ಲಾ ಮೊದಲಾದೆಡೆ ಗಾಂಜಾಹಾವಳಿ ಹೆಚ್ಚಿದ್ದು, ತಂದೆ-ತಾಯಿಗಳು ಮಕ್ಕಳ ವಿರುದ್ಧ ದೂರು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಅಷ್ಟರಮಟ್ಟಿಗೆ ಭಯಾನಕ ವಾತಾವರಣ ಉಂಟಾಗಿದೆ ಎಂದು ಸಚಿವರ ಗಮನ ಸೆಳೆದಾಗ ಇನ್ನು 15 ದಿನಗಳ ಒಳಗಾಗಿ ಈ ಕುರಿತು ಸಮಗ್ರ ವರದಿ ಒಪ್ಪಿಸುವಂತೆ ಸಚಿವರು ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಶಾಸಕ ಗೋಪಾಲಕೃಷ್ಣಬೇಳೂರು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ. ಸಿಇಓ ಹೇಮಂತ್, ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ್, ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.