ಶಿವಮೊಗ್ಗ:’ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಹೆಚ್ಚಳಗೊಳಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ನೌಕರರ ಸಂಘದ ಕಾರ್ಯಕರ್ತರು ಶುಕ್ರವಾರ ಸಂಸದರ (ಸಂಸದರ ಕಚೇರಿ) ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಐಸಿಡಿಎಸ್ (ಸಮಗ್ರ ಶಿಶು ಅಭಿವೃದ್ಧಿ ಯೋಜನೆ) ಯೋಜನೆಯ ಸುವರ್ಣ ಮಹೋತ್ಸವನ್ನು ಕೆಂದ್ರ ಸರ್ಕಾರ ಆಚರಿಸಬೇಕು. ಐಸಿಡಿಎಸ್ ಯೋಜನೆಯನ್ನು ಖಾಯಂ ಮಾಡಬೇಕು, ಖಾಯಂ ಮಾಡುವ ತನಕ ಪ್ರತ್ಯೇಕ ನಿರ್ದೇಶಾನಾಲಯವನ್ನು ರಚಿಸಬೇಕು. 2018 ಫಲಾನುಭವಿಗಳ ಘಟಕ ವೆಚ್ಚ ಹೆಚ್ಚಳ ಮಾಡಿಲ್ಲ, ಕೂಡಲೇ ಘಟಕ ವೆಚ್ಚ ಹೆಚ್ಚಳ ಮಾಡಬೇಕು ಮತ್ತು ಸ್ಥಳೀಯ ಆಹಾರ-ಪದಾರ್ಥಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

2018 ರಿಂದ ಅಂಗನವಾಡಿ ನೌಕರರಿಗೆ ಕೇಂದ್ರ ಸರ್ಕಾರ ವೇತನ ಹೆಚ್ಚಳ ಮಾಡಲಿಲ್ಲ. ಇಂದಿಗೂ ಅಂಗನವಾಡಿ ಕಾರ್ಯಕರ್ತೆಗೆ ₹2,700, ಸಹಾಯಕಿಗೆ ₹1,350 ರೂಗಳನ್ನು ಮಾತ್ರವೇ ನೀಡುತ್ತಿದೆ. ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಕನಿಷ್ಠ ವೇತನವನ್ನಾದರೂ ಜಾರಿ ಮಾಡಬೇಕು.

ಎಫ್ ಆರ್ ಎಸ್ ನ್ನು ರದ್ದು ಮಾಡಬೇಕು. ಇಲ್ಲದಿದ್ದಲ್ಲಿ 6 ತಿಂಗಳಿಗೊಮ್ಮೆ FRS ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ವೈಪೈ ವ್ಯವಸ್ಥೆ ನೀಡಬೇಕು. ಅಂಗನವಾಡಿ ನೌಕರರನ್ನು ಚುನಾವಣಾ ಕೆಲಸಗಳಿಂದ ಬಿಡುಗಡೆಗೊಳಿಸಬೇಕು. ಐಎಲ್ ಸಿ ಶಿಫಾರಸ್ಸಿನಂತೆ ಇವರನ್ನು ಉದ್ಯೋಗಸ್ಥರೆಂದೂ ಪರಿಗಣಿಸಿ ಶಾಸನ ಬದ್ಧ ಸೌಲಭ್ಯಗಳನ್ನು ಕೊಡಬೇಕು. ಅಂಗನವಾಡಿ ನೌಕರರನ್ನು 3 ಮತ್ತು 4ನೇ ದರ್ಜೆಯ ನೌಕರರನ್ನಾಗಿ ಪರಿಗಣಿಸಬೇಕು. ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ LKG-UKG ಯನ್ನು ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಜಯಲಕ್ಷ್ಮಿ, ಮಂಜುಳಾ, ಶ್ಯಾಮಲಾ, ದೀಪಾ, ಸುಮಿತ್ರಾ, ಭದ್ರಾವತಿ ಸುಷ್ಮಾ, ರೂಪ ಇದ್ದರು.