ಇಲ್ಲಿನ ಜಯನಗರ ನಿವಾಸಿ ಪ್ರದೀಪ್ ನೀಡಿದ ದೂರಿನ ಅನುಸಾರ ನಕಲಿ ಕಬ್ಬಿಣದ ಶೀಟ್ ತಯಾರಿಸಿ ಮಾರುತ್ತಿದ್ದವರ ವಿರುದ್ದ ಜಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುಂದರಂ ಇಂಜಿನಿಯರಿಂಗ್ ವರ್ಕ್ಸ್ ನ ನವೀನ್ ಎಂಬುವರು ಬೇರೆ ಕಂಪನಿಯ ಕಬ್ಬಿಣದ ಶೀಟ್ ಗಳಿಗೆ ಜೆ.ಎಸ್.ಡಬ್ಲೂ ಕಂಪನಿಯ ಶೀಟ್ ಎಂದು ನಕಲಿ ಪ್ರಿಂಟ್ ಮಾಡಿ ಮಾರಾಟ ಮಾಡುತ್ತಿರುವುದಾಗಿ ನೀಡಿದ ದೂರಿನ ಮೇರೆಗೆ ಜಯನಗರ ಪೊಲೀಸ್ ಠಾಣೆ ಗುನ್ನೆ ನಂ. 97/2025 ಕಲಂ 318(4) ಬಿ.ಎನ್.ಎಸ್, 51(1), (ಬಿ), 63 Copy Right Act-1957 ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದಲ್ಲಿ ಕೃತ್ಯವೆಸಗಿದ ಆರೋಪಿಗಳನ್ನು ಪತ್ತೆ ಮಾಡುವ ಬಗ್ಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ಜಿ ಕೆ. ಅವರ ನಿರ್ದೇಶನದಂತೆ ಅಪರ ಪೊಲೀಸ್ ಅಧೀಕ್ಷಕ ಕಾರಿಯಪ್ಪ ಕೆಎಸ್,ಪಿ,ಎಸ್ & ಶಿವಮೊಗ್ಗ ಉಪವಿಭಾಗದ ಡಿ.ವೈಎಸ್.ಪಿ. ಸಂಜೀವ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಕೆ,ಎನ್,ಹಳ್ಳಿಯವರ್ ಪಿಎಸ್ಐ ಜಯನಗರ ಠಾಣೆ ಹಾಗೂ ಸಿದ್ದೇಗೌಡ ಪಿಐ ಜಯನಗರ ಪೊಲೀಸ್ ಠಾಣೆ ಶಿವಮೊಗ್ಗ ರವರು ಸದರಿ ಪ್ರಕರಣದ ತನಿಖೆ ಕೈಗೊಂಡು ಶಿವಮೊಗ್ಗ ಎನ್,ಇ,ಎಸ್ ಶಿಕ್ಷಣ ಸಂಸ್ಥೆಗೆ ಸೇರಿದ ಸಿ.ಬಿ.ಆರ್ ಲಾ ಕಾಲೇಜ್ ನ ಟೆರೆಸ್ ಕಟ್ಟಡದ ನವೀನ್ ರವರು ರೂಪಿಂಗ್ ಮಾಡಿಸುತಿದ್ದ ಶೀಟ್ ಗಳನ್ನು ಪರಿಶೀಲಿಸಿದ್ದು ಕಬ್ಬಿಣದ ಶಿಟ್ ಗಳಿಗೆ ಎಸ್.ಡಬ್ಲೂ ಕಂಪನಿಯ ನಕಲಿ ಪ್ರಿಂಟ್ ಹಾಕಿರುವುದು ಕಂಡು ಬಂದಿದ್ದು ಸ್ಥಳದಲ್ಲಿದ್ದ 20 ಅಡಿ ಉದ್ದ 15 ಶೀಟ್ ಗಳನ್ನು ಅಮಾನತ್ತುಪಡಿಸಿಕೊಂಡಿರುತ್ತದೆ.

ನಂತರ ನವೀನ್ ರವರು ಆ ಶೀಟ್ ಗಳನ್ನು ಗುರುಪುರ ದಲ್ಲಿರುವ ನಂದಿ ಟ್ರೇಡಿಂಗ್ ನಲ್ಲಿ ಖರೀದಿ ಮಾಡಿದ್ದಾಗಿ ತಿಳಿಸಿದ್ದು ನಂದಿ ಟ್ರೇಡಿಂಗ್ ನ ಮಾಲಿಕರಾದ ಲೋಹಿತ್ ಬಿ ನಾಯ್ಕ, 34 ವರ್ಷ, ನಂದಿ ಟ್ರೇಡಿಂಗ್ ಕಂಪನಿಯ ಮಾಲೀಕರು ವಾಸ ಹೊಳೆಬೆನವಳ್ಳಿ ಗ್ರಾಮ, 02 ನೇ ಕ್ರಾಸ್, ಶಿವಮೊಗ್ಗ ತಾಲ್ಲೂಕು ರವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿರುತ್ತದೆ. ಇವರು ಕಬ್ಬಿಣದ ಶೀಟ್ ಗಳಿಗೆ ಜೆ.ಎಸ್.ಡಬ್ಲೂ ಎಂದು ಪ್ರಿಂಟ್ ಮಾಡಿ ಮಾರಾಟ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಇವರಿಂದ ಕಬ್ಬಿಣದ ಶೀಟ್ ಗಳಿಗೆ ಜೆ.ಎಸ್.ಡಬ್ಲೂ ಎಂದು ಪ್ರಿಂಟ್ ಮಾಡುವ ಯಂತ್ರವನ್ನು ಅಮಾನತ್ತು ಪಡಿಸಿಕೊಂಡಿದ್ದು ತನಿಖೆ ಮುಂದುವರೆದಿರುತ್ತದೆ.